ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ಗೆ ಮತ್ತೆ ಮಣಿದ ಆಸ್ಟ್ರೇಲಿಯಾ

ಮಿಂಚಿದ ಎವಿನ್‌ ಲೂಯಿಸ್‌; ಕೆರೀಬಿಯನ್‌ ಪಡೆಗೆ 4–1 ರಲ್ಲಿ ಟಿ–20 ಸರಣಿ
Last Updated 17 ಜುಲೈ 2021, 5:02 IST
ಅಕ್ಷರ ಗಾತ್ರ

ಸೇಂಟ್‌ ಲೂಸಿಯಾ: ವೆಸ್ಟ್‌ ಇಂಡೀಸ್‌ ತಂಡ, ಶುಕ್ರವಾರ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 16 ರನ್‌ಗಳಿಂದ ಸೋಲಿಸಿತು. ಸರಣಿಯನ್ನು 4– 1ರಿಂದ ಗೆದ್ದುಕೊಂಡ ಆತಿಥೇಯರತಂಡ, ಈ ವರ್ಷದ ವಿಶ್ವಕಪ್‌ಗೆ ತಮ್ಮನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.

ಡಾರೆನ್‌ ಸಾಮಿ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಎವಿನ್‌ ಲೂಯಿಸ್‌ 34 ಎಸೆತಗಳಲ್ಲಿ ಸಿಡಿಸಿದ 79 ರನ್‌ಗಳ ಇನಿಂಗ್ಸ್‌ ಕೆರೀಬಿಯನ್ನರ ಗೆಲುವಿನಲ್ಲಿ ಬೆಳ್ಳಿರೇಖೆಯಾಯಿತು. ಲೂಯಿಸ್‌ ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣ ನಡೆಸಿ 9 ಸಿಕ್ಸರ್‌, ನಾಲ್ಕುಬೌಂಡರಿಗಳನ್ನು ಚಚ್ಚಿದರು.

ಗೆಲುವಿಗೆ 200 ರನ್‌ಗಳ ಗುರಿ ಎದುರಿಸಿದ್ದ ಆಸ್ಟ್ರೇಲಿಯಾ ಮೊದಲ ಓವರ್‌ನಲ್ಲೇ ಜೋಶ್‌ ಫಿಲಿಪ್‌ ಅವರನ್ನು ಕಳೆದುಕೊಂಡಿತು. ಆದರೆ ನಾಯಕ ಆರನ್‌ ಫಿಂಚ್‌ (34) ಮತ್ತು ಮಿಚೆಲ್‌ ಮಾರ್ಷ್‌ ಇನಿಂಗ್ಸ್‌ ಕಟ್ಟಿದರು. ಇವರಿಬ್ಬರ ನಿರ್ಗಮನದ ನಂತರ ಕಾಂಗರೂ ಪಡೆ, ದೊಡ್ಡ ಜೊತೆಯಾಟಗಳನ್ನು ಕಾಣದೇ 9 ವಿಕೆಟ್‌ಗೆ 183 ರನ್‌ಗಳೊಡನೆ ಇನಿಂಗ್ಸ್‌ ಮುಗಿಸಿತು.

ವೆಸ್ಟ್‌ ಇಂಡೀಸ್‌ ವೇಗಿಗಳಾದ ಶೆಲ್ಡನ್‌ ಕಾಟ್ರೆಲ್‌ (28ಕ್ಕೆ3) ಮತ್ತು ಆಂಡ್ರೆ ರಸೆಲ್‌ (43ಕ್ಕೆ3) ಎದುರಾಳಿಗಳನ್ನು ಕಟ್ಟಿಹಾಕಿದರು.

‘ಗೆಲುವಿಗೆ ಕಾಣಿಕೆ ನೀಡುವುದರಿಂದ ಖುಷಿಯೆನಿಸುತ್ತದೆ. ಆಟದಲ್ಲಿ ಸುಧಾರಣೆ ಕಾಣಲು 2017ರಿಂದ ನಾನು ಪರಿಶ್ರಮ ಪಡುತ್ತಿದ್ದೇನೆ’ ಎಂದು ಲೂಯಿಸ್‌ ಹೇಳಿದರು.

ಒಂದು ಹಂತದಲ್ಲಿ 15 ಓವರುಗಳಲ್ಲಿ 4 ವಿಕೆಟ್‌ಗೆ 169 ರನ್‌ ಗಳಿಸಿದ್ದಾಗ ವೆಸ್ಟ್ ಇಂಡೀಸ್‌ ತಂಡ ಆರಾಮವಾಗಿ 200 ದಾಟುವಂತೆ ಕಂಡಿತ್ತು. ಆದರೆ ಪ್ರವಾಸಿ ತಂಡದ ಬೌಲರ್‌ಗಳಾದ ಆಂಡ್ರೂ ಟೈ ಮತ್ತು ಆ್ಯಡಂ ಝಂಪಾ ಅವರು ವಿಂಡೀಸ್‌ ನಾಗಾಲೋಟಕ್ಕೆ ಲಗಾಮು ತೊಡಿಸಿದರು.

ಇತ್ತಂಡಗಳು ಇನ್ನು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮುಖಾಮುಖಿ ಆಗಲಿವೆ. ಮೊದಲ ಪಂದ್ಯ ಜುಲೈ 20ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT