ಶನಿವಾರ, ನವೆಂಬರ್ 28, 2020
20 °C
ಕೋವಿಡ್‌, ಲಾಕ್‌ಡೌನ್‌ ಅವಧಿ ಸದ್ಬಳಕೆ ಮಾಡಿಕೊಂಡ ಕ್ರಿಕೆಟಿಗರು

PV Web Exclusive: ಬಲು ಜಾಣರು, ಈ ಹುಡುಗರು...

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಪ್ರತಿ ವರ್ಷದ ಮಾರ್ಚ್‌ ಅಂತ್ಯದಲ್ಲಿ ಆರಂಭವಾಗುತ್ತಿದ್ದ ‘ಕ್ರಿಕೆಟ್‌ ಹಬ್ಬ’ಕ್ಕೆ ಮೈದಾನಗಳೆಲ್ಲವೂ ತುಂಬಿರುತ್ತಿದ್ದವು. ನಮ್ಮ ಹುಡುಗನಿಗೂ ಒಂದು ಅವಕಾಶ ಕೊಡಿ ಎಂದು ಪೋಷಕರು ದುಂಬಾಲು ಬೀಳುತ್ತಿದ್ದರು. ಆ ಹಬ್ಬ ಯಾವುದು ಗೊತ್ತೇ; ಬೇಸಿಗೆ ಶಿಬಿರ.

ಬೇಸಿಗೆ ಆರಂಭವಾಗುತ್ತಿದ್ದಂತೆ ವಿವಿಧ ಕ್ರೀಡಾ ಶಿಬಿರಗಳು ನಡೆಯುತ್ತವೆ. ಅದರಲ್ಲೂ ಕ್ರಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆ. ಆದರೆ ಈ ಬಾರಿ ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್‌ ಮೈದಾನಗಳಲ್ಲಿ ನೀರವ ಮೌನ. ಮೈದಾನಗಳು ಖಾಲಿ ಹೊಡೆಯುತ್ತಿದ್ದರೂ ಹೋಗಿ ಆಡಲು ಸಾಧ್ಯವಾಗದ ಪರಿಸ್ಥಿತಿ. ಲಾಕ್‌ಡೌನ್‌ ಸಮಯವನ್ನು ಕೆಲವರು ಏನೂ ಮಾಡದೆ ಕಳೆದರೆ, ಇನ್ನೂ ಕೆಲವರು ಇರುವ ಸೀಮಿತ ಅವಕಾಶ ಮತ್ತು ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮಲ್ಲಿನ ಕ್ರೀಡಾ ಸಾಮರ್ಥ್ಯ, ಕೌಶಲ ಹೆಚ್ಚಿಸಿಕೊಂಡರು.

ಇದಕ್ಕೆ ಹುಬ್ಬಳ್ಳಿಯಲ್ಲಿ ನಡೆದ 14 ವರ್ಷದ ಒಳಗಿನವರ ‘ಲೀಲಾವತಿ ಪ್ಯಾಲೇಸ್‌ ಕಪ್‌’ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿ ಸಾಕ್ಷಿ. ಲಾಕ್‌ಡೌನ್‌ ತೆರವಾದ ಬಳಿಕ ಜಿಲ್ಲೆಯಲ್ಲಿ ನಡೆದ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿ ಇದಾಗಿತ್ತು. ಎಂಟು ತಂಡಗಳು ಪಾಲ್ಗೊಂಡಿದ್ದವು. ಕೋವಿಡ್‌ನಿಂದ ಮನೆಯಲ್ಲಿ ಸಮಯ ಕಳೆದ ಮಕ್ಕಳು ಟೂರ್ನಿಯಲ್ಲಿ ಹೇಗೆ ಆಡುತ್ತಾರೆ? ಅವರಲ್ಲಿ ಫಿಟ್‌ನೆಸ್‌ ಇರುತ್ತದೆಯೇ?, ಕೊರೊನಾ ಸೋಂಕಿನ ಆತಂಕದ ನಡುವೆಯೂ ಮಕ್ಕಳು ಸುರಕ್ಷಿತವಾಗಿ ಅಂತರ ಕಾಯ್ದುಕೊಂಡು ಕ್ರಿಕೆಟ್ ಆಡಬಲ್ಲರಾ? ಹೀಗೆ ಅನೇಕ ಅನುಮಾನಗಳು ಮತ್ತು ಸವಾಲುಗಳು ಇದ್ದವು.


ಲೌಕ್‌ಡೌನ್‌ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಮೊದಲ ಟೂರ್ನಿಯಲ್ಲಿ ಶತಕ ಗಳಿಸಿದ ರೋಹಿತ್‌ ಯರೇಸಿಮಿ (ಬಲ), ಮೊಹಮ್ಮದ್ ಶಮಿ

ಇವುಗಳಿಗೆಲ್ಲ 14 ವರ್ಷದ ಒಳಗಿನ ಮಕ್ಕಳು ದಿಟ್ಟ ಉತ್ತರವನ್ನೇ ನೀಡಿದರು. ಪ್ರತಿ ಪಂದ್ಯದಲ್ಲಿ ಆಟಗಾರರು ಪರಸ್ಪರ ಪೈಪೋಟಿ ಒಡ್ಡುತ್ತಾ, ಸಾಮರ್ಥ್ಯ ಸಾಬೀತು ಮಾಡಿದರು. ಲಾಕ್‌ಡೌನ್‌ ಅವಧಿ ಸದ್ಬಳಕೆ ಮಾಡಿಕೊಂಡು ಮನೆಯಲ್ಲೇ ಮಾಡಿದ್ದ ಅಭ್ಯಾಸದ ಪರಿಶ್ರಮ ಎದ್ದು ಕಾಣುತ್ತಿತ್ತು. ಟೂರ್ನಿಯಲ್ಲಿ ಆಡಿದ ಅನೇಕ ಆಟಗಾರರು ಮನೆಯಲ್ಲಿ ಚೆಂಡು ನೇತು ಹಾಕಿ ಬ್ಯಾಟಿಂಗ್‌ ಅಭ್ಯಾಸ ಮಾಡಿದ್ದರು. ದೈಹಿಕ ಕಸರತ್ತಿಗಾಗಿ ಮನೆಯ ಮಾಳಿಗೆ ಮೇಲೆ ಓಡಾಡಿದ್ದರು. ಮನೆಯೊಳಗೆ ವ್ಯಾಯಾಮ ಮಾಡಿ ಕೋವಿಡ್‌ನಿಂದ ಸುರಕ್ಷತೆ ಪಡೆಯುವ ಜೊತೆಗೆ ದೈಹಿಕ ಶಕ್ತಿಯನ್ನೂ ಹೆಚ್ಚಿಸಿಕೊಂಡಿದ್ದರು.

ಟೂರ್ನಿಯ ಚಾಂಪಿಯನ್‌ ಆದ ಬಿಡಿಕೆ ಕೋಲ್ಟ್ ತಂಡದ ಎಸ್‌. ಮಣಿಕಂಠ ಬುಕಿಟಗಾರ, ಮೊಹಮ್ಮದ್ ಶಮಿ ಮತ್ತು ರೋಹಿತ್‌ ಯರೇಸಿಮಿ ಶತಕಗಳನ್ನು ಬಾರಿಸಿ ತಾವು ಫಿಟ್‌ ಎನ್ನುವುದನ್ನು ಸಾಬೀತು ಮಾಡಿದರು. ಟೂರ್ನಿಯಲ್ಲಿ ಎರಡು ಬಾರಿ ತಲಾ ಐದು ವಿಕೆಟ್‌ಗಳ ಸಾಧನೆ ಮಾಡಿದ ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿಯ ಶ್ರೇಯಾನ್ಶ್‌ ಎ.ಎನ್‌. ಶ್ರೇಷ್ಠ ಬೌಲರ್‌ ಗೌರವ ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಒಟ್ಟು 373 ಬೌಂಡರಿಗಳು, 19 ಸಿಕ್ಸರ್‌ಗಳು, 11 ಅರ್ಧಶತಕಗಳು ಮತ್ತು ಐದು ಶತಕಗಳು ದಾಖಲಾದವು. ಶ್ರೇಯಾನ್ಶ್‌ ಐದು ಇನಿಂಗ್ಸ್‌ಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿ ಮತ್ತಷ್ಟು ಸಾಧನೆಯ ಭರವಸೆ ಮೂಡಿಸಿದರು.


ಟೂರ್ನಿಯ ಶ್ರೇಷ್ಠ ಬೌಲರ್ ಪ್ರಶಸ್ತಿ ಪಡೆದ ಶ್ರೇಯಾನ್ಶ್‌

ಮಕ್ಕಳ ಈ ಸಾಮರ್ಥ್ಯದ ಬಗ್ಗೆ ಪ್ರಜಾವಾಣಿ ಜೊತೆ ಖುಷಿ ಹಂಚಿಕೊಂಡ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ಮುಖ್ಯ ಕೋಚ್‌ ಸಂದೀಪ್‌ ಪೈ ‘ಲಾಕ್‌ಡೌನ್‌ ಅವಧಿಯನ್ನು ನಮ್ಮ ಕ್ಲಬ್‌ನ ಆಟಗಾರರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸುರಕ್ಷಿತ ಅಂತರಕ್ಕೆ ಒತ್ತು ಕೊಟ್ಟು ಜೂನ್‌ನಲ್ಲಿ ಕ್ರಿಕೆಟ್‌ ಅಭ್ಯಾಸ ಪುನರಾರಂಭಿಸಿದ್ದೆವು. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಮಕ್ಕಳು ಸಮಯ ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ನಿತ್ಯ ಇಂತಿಷ್ಟು ಕೆಲಸಗಳನ್ನು ಮಾಡಲು ಹೇಳುತ್ತಿದ್ದೆವು. ನಾವು ಹೇಳಿದಂತೆ ಮಾಡಿ ಅವರು ವಿಡಿಯೊಗಳನ್ನು ನಮಗೆ ಕಳುಹಿಸುತ್ತಿದ್ದರು. ಹೀಗಾಗಿ ಲಾಕ್‌ಡೌನ್‌ ತೆರವಿನ ಬಳಿಕ ನಡೆದ ಮೊದಲ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿ ಆಟಗಾರರು ಉತ್ತಮವಾಗಿ ಆಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಡಿಕೆ ತಂಡದ ಕೋಚ್‌ ಶಿವಾನಂದ ಗುಂಜಾಳ ‘ಕೋವಿಡ್‌ ಕಾರಣಕ್ಕೆ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಧೈರ್ಯ ಮಾಡಿ ಕ್ರೀಡಾಂಗಣಗಳಿಗೆ ಕಳಿಸಿದರು. ಆದ್ದರಿಂದ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ ಟೂರ್ನಿಗಳು ಪುನರಾರಂಭವಾಗಲು ಪೋಷಕರ ಧೈರ್ಯವೇ ಮುಖ್ಯ ಕಾರಣ. ಈ ಒಂದು ಟೂರ್ನಿ ಮುಂದೆ ಮತ್ತಷ್ಟು ಟೂರ್ನಿಗಳ ಆರಂಭಕ್ಕೆ ವೇದಿಕೆಯಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಟೂರ್ನಿಯ ಶ್ರೇಷ್ಠ ಬ್ಯಾಟ್ಸ್‌ಮನ್‌ ಗೌರವ ಪಡೆದ ಮಣಿಕಂಠ ಅವರ ತಂದೆ ಶಿವಾನಂದ ಬುಕಿಟಗಾರ ‘ಲಾಕ್‌ಡೌನ್‌ ಇದ್ದರೂ ಮಗನ ಕ್ರಿಕೆಟ್ ಅಭ್ಯಾಸಕ್ಕೆ ಎಂದು ‘ಲಾಕ್‌’ ಇರಲಿಲ್ಲ. ನಿತ್ಯ ಮೂರು ತಾಸು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ. ಹೊಸ ಶೈಲಿಯ ಹೊಡೆತಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದ. ಇದರಿಂದ ನಿರಂತರವಾಗಿ ಫಿಟ್‌ನೆಸ್‌ ಉಳಿಸಿಕೊಳ್ಳಲು ಸಾಧ್ಯವಾಯಿತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು