ಸೋಮವಾರ, ಜೂನ್ 21, 2021
28 °C
ವದಂತಿಗೆ ತೆರೆಯೆಳೆದ ಕ್ರಿಕೆಟ್‌ ದಕ್ಷಿಣ ಆಫ್ರಿಕಾ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಬಿಡಿ ಪುನರಾಗಮನ ಇಲ್ಲ –ದಕ್ಷಿಣ ಆಫ್ರಿಕಾ

ಪಿಟಿಐ Updated:

ಅಕ್ಷರ ಗಾತ್ರ : | |

ಜೊಹಾನ್ಸ್‌ಬರ್ಗ್ (ಪಿಟಿಐ): ‘ಎ.ಬಿ.ಡಿ ವಿಲಿಯರ್ಸ್‌ ಅವರು ನಿವೃತ್ತಿಯಿಂದ ಹೊರಬರುವುದಿಲ್ಲ. ಈ ವಿಷಯದಲ್ಲಿ ಮನಸ್ಸನ್ನು ಬದಲಾಯಿಸದಿರಲು ಅವರು ನಿರ್ಧರಿಸಿದ್ದಾರೆ’ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕ (ಸಿಎಸ್‌ಎ) ಮಂಗಳವಾರ ಪ್ರಕಟಿಸಿದೆ.

ಆ ಮೂಲಕ ಅವರ ಪುನರಾಗಮನದ ಕುರಿತು ಎದ್ದಿದ್ದ ವದಂತಿಗಳಿಗೆ ತೆರೆಬಿದ್ದಂತಾಗಿದೆ. ‘ಎಬಿಡಿ ಜೊತೆ ಚರ್ಚೆ ಮುಗಿದಿದ್ದು, ಅವರು ತಮ್ಮ ನಿವೃತ್ತಿ ನಿರ್ಧಾರ ಅಂತಿಮ ಎಂದು ತಿಳಿಸಿದ್ದಾರೆ’ ಎಂದು ಸಿಎಸ್‌ಎ ಪ್ರಕಟಿಸಿದೆ.

ಆ ಮೂಲಕ ಮುಂಬರುವ ಟಿ–20 ವಿಶ್ವಕಪ್‌ನಲ್ಲಿ ಅವರು ಆಡುವುದಿಲ್ಲ ಎನ್ನುವುದು ಖಚಿತವಾಯಿತು. ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ ನಂತರ ಸಿಎಸ್‌ಎ ಈ ಹೇಳಿಕೆ ನೀಡಿದೆಯೆನ್ನಲಾಗಿದೆ.

ಕೆರೀಬಿಯನ್ನರ ವಿರುದ್ಧ ಎರಡು ಟೆಸ್ಟ್‌ ಮತ್ತು ಐದು ಟಿ–20 ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದೆ.

‘ಮಿ. 360’ ಎಂದು ಹೆಸರು ಪಡೆದಿರುವ ಡಿ ವಿಲಿಯರ್ಸ್‌ ಅವರು 2018ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 114 ಟೆಸ್ಟ್‌, 228 ಏಕದಿನ ಮತ್ತು 78 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದ ಡಿ ವಿಲಿಯರ್ಸ್‌, ಹಠಾತ್ತನೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.

ದಕ್ಷಿಣ ಆಫ್ರಿಕದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಡಿ ವಿಲಿಯರ್ಸ್‌ ಅವರನ್ನು ಗುರುತಿಸಲಾಗುತ್ತಿದೆ.

ಟಿ–20 ವಿಶ್ವಕಪ್‌ ಮುಂಚೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡುವುದಾದರೆ ಅದು ತಮ್ಮ ‍ಪಾಲಿಗೆ  ‘ಅಮೋಘ’ ವಿಷಯ ಆಗಬಲ್ಲದು ಎಂದು ಡಿ ವಿಲಿಯನ್ಸ್‌ ಕಳೆದ ತಿಂಗಳು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಪಂದ್ಯ ಗೆಲ್ಲಿಸುವ ಇನಿಂಗ್ಸ್ ನಂತರ ಹೇಳಿದ್ದರು.

ಟಿ–20 ವಿಶ್ವಕಪ್‌ ಈ ವರ್ಷದ ಅಕ್ಟೋಬರ್‌– ನವೆಂಬರ್‌ನಲ್ಲಿ ಭಾರತದಲ್ಲಿ ನಿಗದಿಯಾಗಿದೆ.

ಐಪಿಎಲ್‌ ನಂತರ ತಮ್ಮ ಫಾರ್ಮ್‌ ಮತ್ತು ಫಿಟ್ನೆಸ್‌ ವಿಶ್ಲೇಷಿಸಿ, ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ಜೊತೆ ಚರ್ಚೆ ನಡೆಸುವುದಾಗಿ ಚೆನ್ನೈನಲ್ಲಿ ನಡೆದ ಆ ಪಂದ್ಯದ ನಂತರ ಎಬಿಡಿ ತಿಳಿಸಿದ್ದರು. ಈ ಬಾರಿ  ಐಪಿಎಲ್‌, ಕೋವಿಡ್‌ ಸೋಂಕು ಹೆಚ್ಚಳದ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿತ್ತು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು