ಗ್ರೇಟರ್ ನೊಯ್ಡಾ: ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯಕ್ಕೆ ಮಳೆ ಕೃಪೆದೋರುವಂತೆ ಕಾಣುತ್ತಿಲ್ಲ. ಕ್ರೀಡಾಂಗಣ ತೇವಗೊಂಡಿದ್ದ ಕಾರಣ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಬುಧವಾರ ಒಂದೂ ಎಸೆತ ಕಾಣದೇ ರದ್ದುಗೊಂಡಿತು.
ಮೊದಲ ಎರಡು ದಿನ ಕ್ರೀಡಾಂಗಣದ ಕೆಲಭಾಗ ಕೊಚ್ಚಿಯಾಗಿದ್ದ ಕಾರಣ ಆಟ ಸಾಧ್ಯವಾಗಿರಲಿಲ್ಲ. ಅಷ್ಟೇ ಏಕೆ, ಟಾಸ್ ಕೂಡ ನಡೆದಿರಲಿಲ್ಲ.
ಮಂಗಳವಾರ ಸಂಜೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಿಂದ ಪಿಚ್ ಮುಚ್ಚಲು ಕವರ್‌ಗಳನ್ನು ತರಲಾಗಿತ್ತು. ಆದರೆ, ರಾತ್ರಿ ಸುರಿದ ಮಳೆಯಿಂದ ಇತರ ಕೆಲವು ಭಾಗಗಳಲ್ಲಿ ನೀರು ನಿಂತಿತ್ತು. ಹೀಗಾಗಿ ಹೆಚ್ಚು ಸಮಯ ತೆಗೆದುಕೊಳ್ಳದೇ ಅಂಪೈರ್‌ಗಳು ದಿನದಾಟವನ್ನು ಬೇಗನೇ ರದ್ದುಗೊಳಿಸುವ ನಿರ್ಧಾರಕ್ಕೆ ಬಂದರು.
‘ಬಿಟ್ಟುಬಿಟ್ಟು ಬಂದ ಮಳೆಯಿಂದಾಗಿ ಮೂರನೇ ದಿನದಾಟ ರದ್ದುಗೊಳಿಸಲಾಗಿದೆ. ಮಳೆಯಿಲ್ಲದೇ ಹೋದಲ್ಲಿ ನಾಳೆಯಿಂದ 98 ಓವರುಗಳ ಆಟ ನಡೆಯಲಿದೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಪಂದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿಲ್ಲ.