ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 DC vs LSG | KL ರಾಹುಲ್ ಬಳಗಕ್ಕೆ 2ನೇ ಸೋಲು, ಪಂತ್ ಪಡೆಗೆ 2ನೇ ಗೆಲುವು

Published 12 ಏಪ್ರಿಲ್ 2024, 17:54 IST
Last Updated 12 ಏಪ್ರಿಲ್ 2024, 17:54 IST
ಅಕ್ಷರ ಗಾತ್ರ

ಲಖನೌ: ತಂಡಕ್ಕೆ ಪುನರಾಗಮನ ಮಾಡಿದ ಕುಲದೀಪ್ ಯಾದವ್ ಅವರ ಸ್ಫೂರ್ತಿಯುತ ಬೌಲಿಂಗ್ (20ಕ್ಕೆ3) ಮತ್ತು ಪದಾರ್ಪಣೆ ಪಂದ್ಯದಲ್ಲೇ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ (55, 35ಎಸೆತ) ಅವರ ಬಿರುಸಿನ ಅರ್ಧ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್ ಮೇಲೆ ಆರು ವಿಕೆಟ್‌ಗಳ ಸುಲಭ ಜಯಪಡೆಯಿತು.

ಈ ಎರಡನೇ ಗೆಲುವಿನಿಂದ, ಕೊನೆಯ ಸ್ಥಾನದಲ್ಲಿದ್ದ ಡೆಲ್ಲಿ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿತು. 160ಕ್ಕಿಂತ ಹೆಚ್ಚು ರನ್ ಗಳಿಸಿದಾಗಲೆಲ್ಲಾ ಆ ಮೊತ್ತವನ್ನು ರಕ್ಷಿಸುತ್ತಿದ್ದ ಲಖನೌ ತಂಡದ ದಾಖಲೆಯೂ ಕೊನೆಗೊಂಡಿತು. 14 ಪಂದ್ಯಗಳಲ್ಲಿ ಮೊದಲ ಬಾರಿ 160+ ಮೊತ್ತ ರಕ್ಷಿಸಲು ಕೆ.ಎಲ್‌.ರಾಹುಲ್ ಬಳಗ ವಿಫಲವಾಯಿತು.

ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ನಿರೀಕ್ಷೆಯಂತೆ ಬ್ಯಾಟ್‌ ಮಾಡಿದ ಲಖನೌ ತಂಡ ಮಧ್ಯಮ ಹಂತದ ಕುಸಿತದಿಂದ ಚೇತರಿಸಿ 7 ವಿಕೆಟ್‌ಗೆ 167 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. ಆಯುಷ್‌ ಬಡೋನಿ (ಔಟಾಗದೇ 55, 35ಎ) ಅವರು ಅರ್ಧ ಶತಕ ಇದಕ್ಕೆ ಕಾರಣವಾಯಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭದಿಂದಲೇ ಬಿರುಸಿನ ಆಟವಾಡಿ 11 ಎಸೆತಗಳು ಬಾಕಿಯಿರುವಂತೆ 4 ವಿಕೆಟ್‌ಗೆ 170 ರನ್ ಹೊಡೆಯಿತು.
ವೇಗಿ ಮಯಂಕ್ ಯಾದವ್ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಅರ್ಷದ್ ಖಾನ್ ಮಾಡಿದ 19ನೇ ಓವರ್‌ನ ಮೊದಲ ಎಸೆತವನ್ನು ಡೀಪ್‌ ಮಿಡ್‌ ವಿಕೆಟ್‌ ಮೇಲೆ ಸಿಕ್ಸರ್ ಎತ್ತಿದ ಟ್ರಿಸ್ಟನ್ ಸ್ಟಬ್ಸ್ ಗೆಲುವನ್ನು ಪೂರೈಸಿದರು.

ಡೆಲ್ಲಿ 63 ರನ್‌ಗಳಾಗುಷ್ಟರಲ್ಲಿ ವಾರ್ನರ್ ಮತ್ತು ಪೃಥ್ವಿ ಶಾ ಅವರ ವಿಕೆಟ್‌ ಕಳೆದುಕೊಂಡಾಗ ಲಖನೌ ತಂಡದಿಂದ ಮರುಹೋರಾಟದ ಸಂಕೇತಗಳು ಕಾಣಿಸಿದ್ದವು.
ಆದರೆ ಆಸ್ಟ್ರೇಲಿಯಾದ 22 ವರ್ಷದ ಆಲ್‌ರೌಂಡರ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಬೀಸಾಟಕ್ಕೆ ತೊಡಗಿ ಆ ಆತಂಕ ದೂರ ಮಾಡಿದರು. ಅವರಿಗೆ ನಾಯಕ ರಿಷಭ್ ಪಂತ್‌ (41, 24ಎಸೆತ) ಬೆಂಬಲ ನೀಡಿದರು. ಇವರಿಬ್ಬರು 46 ಎಸೆತಗಳಲ್ಲಿ 77 ರನ್‌ ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು.

ಇದಕ್ಕೆ ಮೊದಲು ಎಡಗೈ ಸ್ಪಿನ್ನರ್‌ ಕುಲದೀಪ್ ಯಾದವ್ ಮಿಂಚಿದರು. ತೊಡೆಯ ನೋವಿನಿಂದ ಮೂರು ಪಂದ್ಯ ಕಳೆದುಕೊಂಡಿದ್ದ ಕುಲದೀಪ್ 4 ಓವರುಗಳಲ್ಲಿ ಒಂದೂ ಬೌಂಡರಿ ನೀಡದೇ 20 ರನ್ನಿಗೆ 3 ವಿಕೆಟ್ ಉರುಳಿಸಿದಾಗ ಲಖನೌ ಮೊತ್ತ 5 ವಿಕೆಟ್‌ಗೆ 77.

ಕುಲದೀಪ್‌ ಅವರು ನಾಯಕ ಕೆ.ಎಲ್‌.ರಾಹುಲ್ (39, 22ಎ), ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌, ಉತ್ತಮ ಲಯದಲ್ಲಿರುವ ನಿಕೋಲಸ್‌ ಪೂರನ್ (0)– ಈ ಮೂರೂ ವಿಕೆಟ್‌ಗಳನ್ನು ಪಡೆದಿದ್ದರು. ಆತಿಥೇಯ ತಂಡ ಒಂದು ಹಂತದಲ್ಲಿ 7 ವಿಕೆಟ್‌ಗೆ 94 ರನ್ ಗಳಿಸಿ
ದುಸ್ಥಿತಿಯಲ್ಲಿತ್ತು.

ಈ ಸಂದರ್ಭದಲ್ಲಿ ಬಡೋನಿ ಅವರು ಅರ್ಷದ್‌ ಖಾನ್‌ (20, 16ಎ) ಜೊತೆಗೂಡಿ ಲಖನೌ ತಂಡದ ಮೊತ್ತಕ್ಕೆ ಗೌರವದ ಲೇಪನ ನೀಡಿದರು. ‌ಮುರಿಯದ ಎಂಟನೇ ವಿಕೆಟ್‌ಗೆ ಇವರಿಬ್ಬರು 42 ಎಸೆತಗಳಲ್ಲಿ 73 ರನ್ ಸೇರಿಸಿದರು.

ಆರಂಭ ಆಟಗಾರ ಕ್ವಿಂಟನ್‌ ಡಿ ಕಾಕ್ ಮತ್ತು ದೇವದತ್ತ ಪಡಿಕ್ಕಲ್‌ ಅವರ ವಿಕೆಟ್‌ಗಳನ್ನು ಖಲೀಲ್ ಅಹ್ಮದ್ ಪಡೆದರು. ಪಡಿಕ್ಕಲ್ (3) ಅವರು ಐದನೇ ಬಾರಿಯೂ ಎರಡಂಕಿ
ಮೊತ್ತ ಗಳಿಸಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT