ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಕುಗ್ಗಿರುವ ಪಾಕಿಸ್ತಾನಕ್ಕೆ ಇಂದು ಕೆನಡಾ ಎದುರಾಳಿ

Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕ ವಿರುದ್ಧ ಆಘಾತಕಾರಿ ಸೋಲು, ನಂತರ ಭಾರತ ವಿರುದ್ಧದ ಅಲ್ಪ ಅಂತರದ ಸೋಲಿನಿಂದ ಕುಗ್ಗಿರುವ ಪಾಕಿಸ್ತಾನ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ‘ಎ’ ಗುಂಪಿನ ಲೀಗ್‌ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಸಹಜವಾಗಿ ಪಾಕಿಸ್ತಾನ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಸೂಪರ್‌ ಓವರ್‌ನಲ್ಲಿ ಅಮೆರಿಕಕ್ಕೆ ಮಣಿದ ಪಾಕಿಸ್ತಾನ, ಅಲ್ಪ ಸ್ಕೋರುಗಳನ್ನು ಕಂಡ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಎದುರು ಭಾನುವಾರ ಆರು ರನ್‌ಗಳ ಸೋಲನುಭವಿಸಿತ್ತು.

ಕೆನಡಾ ಮತ್ತು ಐರ್ಲೆಂಡ್‌ ಎದುರು ಉಳಿದೆರಡು ಪಂದ್ಯಗಳಲ್ಲಿ ದೊಡ್ಡ ಗೆಲುವಿನ ಜೊತೆಗೆ, ಅಮೆರಿಕ ತಂಡವು ತನ್ನ ಉಳಿದೆರಡು ಪಂದ್ಯಗಳಲ್ಲಿ ಭಾರತ ಮತ್ತು ಐರ್ಲೆಂಡ್‌ ಎದುರು ಸೋತರಷ್ಟೇ ಪಾಕಿಸ್ತಾನದ ಸೂಪರ್‌ ಎಂಟು ಅವಕಾಶಕ್ಕೆ ಬಲ ಬರಲಿದೆ. ಸದ್ಯ ಎರಡು ಪಂದ್ಯಗಳ ನಂತರ ಅಮೆರಿಕದ ರನ್‌ ರೇಟ್‌ +0.626 ಆಗಿದ್ದು, ಪಾಕಿಸ್ತಾನ ರನ್ ದರ ನಿರಾಶಾದಾಯಕ –0.150 ಆಗಿದೆ. ಹೀಗಾಗಿ ಸಮಾನ ಪಾಯಿಂಟ್ಸ್ ಗಳಿಸಿದಲ್ಲಿ ರನ್‌ರೇಟ್‌ ನಿರ್ಣಾಯಕವಾಗುವ ಕಾರಣ ಪಾಕ್‌ಗೆ ದೊಡ್ಡ ಅಂತರದ ಗೆಲುವುಗಳು ಅನಿವಾರ್ಯ.

2009ರ ಚಾಂಪಿಯನ್ ಪಾಕಿಸ್ತಾನ ಈಗ ಮೊದಲಿನ ಶಕ್ತ ತಂಡವಾಗಿ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಬಾಬರ್ ಆಜಂ ನಾಯಕತ್ವ ವಹಿಸಿಕೊಂಡಿದ್ದಾರೆ. ವಿಶ್ವಕಪ್‌ಗೆ ಸ್ವಲ್ಪ ಮೊದಲು ಶಹೀನ್‌ ಶಾ ಅಫ್ರೀದಿ ಅವರನ್ನು ನಾಯಕತ್ವದಿಂದ ಬದಲಾಯಿಸಿದ ಕಾರಣ ಅಂತಃಕಲಹ ಪೂರ್ಣವಾಗಿ ಶಮನಗೊಂಡಂತೆ ಇಲ್ಲ.

ಅಮೆರಿಕದ ವಿರುದ್ಧ ಬಾಬರ್ ಮತ್ತು ಶದಾಬ್ ಖಾನ್ ಮಾತ್ರ 40ಕ್ಕಿಂತ ಹೆಚ್ಚು ರನ್ ಗಳಿಸಿದ್ದರು. ಭಾರತ ವಿರುದ್ಧ 120 ರನ್‌ಗಳ ಗುರಿಯನ್ನು ಎದುರಿಸುವಾಗ ಯಾರೊಬ್ಬರೂ ಧೈರ್ಯದಿಂದ ಆಡಲಿಲ್ಲ. ತಂಡ 7 ವಿಕೆಟ್‌ಗೆ 113 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಫಖರ್ ಜಮಾನ್, ಇಮದ್‌ ವಾಸಿಂ, ಶದಾಬ್‌ ಖಾನ್ ಮತ್ತು ಇಫ್ತಿಕಾರ್ ಅಹ್ಮದ್ ಕೆಟ್ಟ ಹೊಡೆತಗಳಿಗೆ ಹೋಗಿ ವಿಕೆಟ್‌ ನೀಡಿದ್ದರು.

ಬೌಲರ್‌ಗಳ ಪೈಕಿ ನಸೀಮ್ ಶಾ ಮತ್ತು ಮೊಹಮ್ಮದ್ ಆಮೀರ್ ಉತ್ತಮ ಪ್ರದರ್ಶನ ನೀಡಿರುವುದೊಂದೇ ಸಮಾಧಾನಕರ ಅಂಶ. ಪ್ರಮುಖ ಬೌಲರ್‌ ಶಹೀನ್ ಶಾ ಅಫ್ರೀದಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಅನುಕೂಲಕರ ಪಿಚ್‌ನಲ್ಲಿ ಅವರೇನೂ ಗಮನಸೆಳೆದಿಲ್ಲ.

ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದಿರುವ ಕೆನಡಾ, ‘ಎ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕಕ್ಕೆ ಏಳು ವಿಕೆಟ್‌ ಸೋತರೂ ಪುಟಿದೆದ್ದ ಆ ತಂಡವು ತನಗಿಂತ ಪ್ರಬಲ ಐರ್ಲೆಂಡ್ ತಂಡಕ್ಕೆ 12 ರನ್‌ಗಳಿಂದ ಸೋಲುಣಿಸಿತ್ತು. ಅಮೆರಿಕದ ವಿರುದ್ಧ ಸೋತರೂ, ಕೆನಡಾ 194 ರನ್‌ಗಳ ದೊಡ್ಡ ಮೊತ್ತ ಗಳಿಸಿತ್ತು ಎನ್ನುವುದನ್ನು ಗಮನಾರ್ಹ ಅಂಶ. ಕೆನಡಾ ತಂಡದ ಯಶಸ್ಸು ಅನುಭವಿ ಬ್ಯಾಟರ್‌ ನವನೀತ್ ಧಾಲಿವಾಲ್‌ ಅವರ ನಿರ್ವಹಣೆಯನ್ನು ಅವಲಂಬಿಸಿದೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌. ಡಿಸ್ನಿ ಹಾಟ್‌ಸ್ಟಾರ್‌ ಆ್ಯಪ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT