ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ನೆರವಿಗೆ ದೇವದತ್ತ–ಪವನ್‌

ತಮಿಳುನಾಡು ವಿರುದ್ಧ ರಣಜಿ ಟ್ರೋಫಿ ಪಂದ್ಯ: ಒಂದು ವಿಕೆಟ್ ಕಬಳಿಸಿದ ರವಿಚಂದ್ರನ್‌ ಅಶ್ವಿನ್‌
Last Updated 10 ಡಿಸೆಂಬರ್ 2019, 6:06 IST
ಅಕ್ಷರ ಗಾತ್ರ

ದಿಂಡಿಗಲ್‌: ಅನುಭವಿ ಆಟಗಾರರು ಉಪಯುಕ್ತ ಕೊಡುಗೆ ನೀಡಲು ವಿಫಲ ರಾದ ದಿನ, ಯುವ ಉತ್ಸಾಹಿ ಗಳಾದ ದೇವದತ್ತ ಪಡಿಕ್ಕಲ್‌ ಮತ್ತು ಪವನ್‌ ದೇಶಪಾಂಡೆ ಕರ್ನಾಟಕ ತಂಡಕ್ಕೆ ಆಸರೆಯಾದರು. ಸೋಮವಾರ ತಮಿಳುನಾಡು ವಿರುದ್ಧ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಲೀಗ್‌ ಪಂದ್ಯದಲ್ಲಿ ಇವರಿಬ್ಬರು ಅರ್ಧ ಶತಕದೊಡನೆ ಕರ್ನಾಟಕ ಕುಸಿಯದಂತೆ ನೋಡಿಕೊಂಡರು.

ಎನ್‌ಆರ್‌ಪಿ ಕಾಲೇಜು ಮೈದಾ ನದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ಕರುಣ್‌ ನಾಯರ್‌ ಬಳಗ ಮೊದಲ ದಿನದಾಟದ ಕೊನೆಗೆ 6 ವಿಕೆಟ್‌ಗೆ 259 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು.

‌ಲಂಚ್‌ಗೆ ಅರ್ಧ ಗಂಟೆ ಇರುವಾಗ ಕರ್ನಾಟಕದ 3 ವಿಕೆಟ್‌ಗಳನ್ನು 88 ರನ್‌ಗಳಿಗೆ ಪಡೆದಿದ್ದ ತಮಿಳುನಾಡು ಹಿಡಿತ ಪಡೆಯುವ ಲಕ್ಷಣಗಳು ಗೋಚರಿ ಸಿದ್ದವು. ಬ್ಯಾಟಿಂಗ್ ಬೆನ್ನೆಲುಬಾದ ಮಯಂಕ್‌ ಅಗರವಾಲ್‌ (43, 78 ಎಸೆತ) ಮತ್ತು ಕರುಣ್‌ ನಾಯರ್‌ (8) ಅವರೂ ನಿರ್ಗಮಿಸಿದ್ದರು.

ಆದರೆ ಈ ..ತುವಿನಲ್ಲಿ ನಿಯಮಿತ ಓವರ್‌ಗಳ ಪಂದ್ಯದಲ್ಲಿ ರನ್‌ ಹೊಳೆ ಹರಿಸಿದ್ದ ದೇವದತ್ತ ಪಡಿಕ್ಕಲ್‌, ಆ ಫಾರ್ಮ್ ಮುಂದುವರಿಸುವಂತೆ ಆಡಿ 78 ರನ್‌ (182 ಎಸೆತ, 7 ಬೌಂಡರಿ) ಬಾರಿಸಿದರು. ಅವರಿಗೆ ಪವನ್‌ ದೇಶ ಪಾಂಡೆ (65, 142 ಎಸೆತ, 6 ಬೌಂಡರಿ) ಉಪಯುಕ್ತ ಬೆಂಬಲ ನೀಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 116 ರನ್‌ ಸೇರಿಸುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 35) ಅವರು, ಖಾತೆ ತೆರೆಯದ ನೈಟ್‌ ವಾಚ್‌ಮನ್‌ ಡೇವಿಡ್‌ ಮಥಾಯಸ್‌ ಜೊತೆ ಮಂಗಳವಾರ ಆಟ ಮುಂದುವರಿಸಲಿದ್ದಾರೆ. ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ಗಿಂತ ಮೊದಲು ಮಥಾಯಸ್‌ ಅವರನ್ನು ಕಳುಹಿಸಲಾಯಿತು.

ನಾಲ್ಕನೇ ಓವರ್‌ನಲ್ಲೇ ಕರ್ನಾ ಟಕ, ಡೇಗಾ ನಿಶ್ಚಲ್‌ ಅವರನ್ನು ಕಳೆದು ಕೊಂಡಿತು. ಕೆ.ವಿಘ್ನೇಶ್‌ ಬೌಲಿಂಗ್‌ನಲ್ಲಿ ಬ್ಯಾಟ್‌ ಮತ್ತು ಪ್ಯಾಡ್‌ ಮಧ್ಯೆ ನುಸುಳಿದ ಚೆಂಡು ವಿಕೆಟ್‌ಗೆ ಬಡಿಯಿತು. ಮೊದಲ ಬೌಂಡರಿಗೆ 32 ಎಸೆತ ತೆಗೆದುಕೊಂಡ ಅಗರವಾಲ್‌, ಅನುಭವಿ ಆರ್‌.ಅಶ್ವಿನ್‌ ಬೌಲಿಂಗ್‌ನಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್‌ ಎತ್ತಿ ಕುದುರಿಕೊಳ್ಳುವ ಸೂಚನೆ ಮೂಡಿಸಿದರು. ಆದರೆ ಮೊದಲ ಪಂದ್ಯ ಆಡಿದ ಎಂ.ಸಿದ್ಧಾರ್ಥ್‌ ಬೌಲಿಂಗ್‌ನಲ್ಲಿ ಮಯಂಕ್‌ ಮೊದಲ ಸ್ಲಿಪ್‌ನಲ್ಲಿ ಕ್ಯಾಚಿತ್ತರು. ನಾಯರ್‌, ಷಾರ್ಟ್‌ ಮಿಡ್‌ ವಿಕೆಟ್‌ನಲ್ಲಿದ್ದ ವಿಜಯ್‌ ಶಂಕರ್ ಅವರ ಫೀಲ್ಡಿಂಗ್‌ ಪರೀಕ್ಷಿಸಲು ಹೋಗಿ ರನ್‌ಔಟ್‌ ಆದರು.

19 ವರ್ಷದ ಪಡಿಕ್ಕಲ್‌, ದೀರ್ಘ ಅವಧಿಯ ಕ್ರಿಕೆಟ್‌ನಲ್ಲೂ ಉಪಯುಕ್ತ ಆಟವಾಡಿದರು. ವಿಜಯ್‌ ಹಜಾರೆ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗಳಲ್ಲಿ ಆಕ್ರಮಣಕಾರಿಯಾಗಿ ಆಡಿದ್ದ ಅವರು ಇಲ್ಲಿ ಅದಕ್ಕೆ ಕಡಿವಾಣ ಹಾಕಿಕೊಂಡರು. ಅವರಿಗೆ ಅದೃಷ್ಟದ ಬಲವೂ ಇತ್ತು. ಏಳು ರನ್‌ ಗಳಿಸಿದ್ದಾಗ ಅಶ್ವಿನ್‌ ಬೌಲಿಂಗ್‌ನಲ್ಲಿ ಸಿದ್ಧಾರ್ಥ್‌ ಕ್ಯಾಚ್‌ ನೆಲಕ್ಕೆ ಹಾಕಿದರು.

ಸಿದ್ಧಾರ್ಥ್‌ಗೆ ಪದಾರ್ಪಣೆ ಪಂದ್ಯ ದುಃಸ್ವಪ್ನವಾಗುವಂತೆ ಕಂಡಿತು. ಎಡಗೈ ಆಟಗಾರ ಪಡಿಕ್ಕಲ್‌ 64 ರನ್‌ ಗಳಿಸಿದ್ದಾಗ, ಮುರುಗನ್‌ ಅಶ್ವಿನ್‌ ಬೌಲಿಂಗ್‌ನಲ್ಲಿ ಪಡಿಕ್ಕಲ್‌ ಯತ್ನಿಸಿದ ಮೇಲ್ಮಟ್ಟದ ಡ್ರೈವ್‌, ಮಿಡ್‌ ಆನ್‌‌‌ನಲ್ಲಿದ್ದ ಸಿದ್ಧಾರ್ಥ್‌ ಕಡೆಗೆ ಹೋಯುತು. ಆದರೆ ಸುಲಭ ಕ್ಯಾಚನ್ನು ನೆಲಕ್ಕೆ ಚೆಲ್ಲಿದರು. ಆದರೆ ಕೆಲವೇ ಹೊತ್ತಿನ ನಂತರ ಬದಲಿ ಫೀಲ್ಡರ್‌ ಕೆ.ಮುಕುಂದ್‌, ಷಾರ್ಟ್‌ ಕವರ್ಸ್‌ನಲ್ಲಿ ಉತ್ತಮವಾಗಿ ಹಿಡಿದ ಕೆಳಮಟ್ಟದ ಕ್ಯಾಚಿಗೆ ಅವರು ನಿರ್ಗಮಿಸಿದಾಗ ತಮಿಳುನಾಡು ಆಟಗಾರರು ನಿಟ್ಟುಸಿರು ಬಿಟ್ಟರು.

ಆರಂಭದಲ್ಲಿ ಪಡಿಕ್ಕಲ್‌ಗೆ ಬೆಂಬಲಿಗನ ಪಾತ್ರ ವಹಿಸಿದ್ದ ದೇಶಪಾಂಡೆ, ಅರ್ಧ ಶತಕದ ಹಾದಿಯಲ್ಲಿ ಕೆಲವು ಆಕರ್ಷಕ ಸ್ವೀಪ್‌ಗಳನ್ನು ಆಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರಿಗೆ ಎರಡನೇ ಅರ್ಧ ಶತಕ.

ನಾಲ್ಕು ಸ್ಪಿನ್ನರ್‌ಗಳನ್ನು ಆಡಿಸುವ ತಮಿಳುನಾಡು ತಂತ್ರ ಪೂರ್ಣ ಯಶ ಕಾಣಲಿಲ್ಲ. ಅನುಭವಿ ಆರ್‌.ಅಶ್ವಿನ್‌ ಗಮನ ಸೆಳೆದರು. ಹಲವು ಸಂದರ್ಭಗಳಲ್ಲಿ ಅವರು ಕರ್ನಾಟಕ ಆಟಗಾರರನ್ನು ಗಲಿಬಿಲಿಗೊಳಿಸಿದರು. ಕೊನೆಗೂ ತಮ್ಮ ಯತ್ನಕ್ಕೆ ಯಶಸ್ಸಿನ ರೂಪದಲ್ಲಿ ದೇಶಪಾಂಡೆ ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT