'ಪಕ್ಕದ ಮನೆ ಹೆಂಡ್ತಿ'; ಸಿಕ್ಕಿಬಿದ್ದ ದಿನೇಶ್ ಕಾರ್ತಿಕ್ ಕ್ಷಮೆಯಾಚನೆ

ಲಂಡನ್: ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ.
ಕಾಮೆಂಟರಿ ನೀಡುತ್ತಾ, ದಿನೇಶ್ ಕಾರ್ತಿಕ್ ಅವರು 'ಕ್ರಿಕೆಟ್ ಬ್ಯಾಟ್' ಅನ್ನು ನೆರೆಮನೆಯ ಪತ್ನಿಗೆ ಹೋಲಿಕೆ ಮಾಡಿದ್ದರು.
ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ.
'ಬಹುತೇಕ ಬ್ಯಾಟ್ಸ್‌ಮನ್‌ಗಳು ತಮ್ಮ ಬ್ಯಾಟ್ ಇಷ್ಟಪಡುವುದಿಲ್ಲ. ಅವರು ಇನ್ನೊಬ್ಬ ಆಟಗಾರನ ಬ್ಯಾಟ್ ಅನ್ನು ಇಷ್ಟಪಡುತ್ತಾರೆ. ಬ್ಯಾಟ್‌ಗಳು ನೆರೆಮನೆಯವನ ಪತ್ನಿಯ ಹಾಗೆ, ಯಾವತ್ತೂ ಸುಂದರವಾಗಿ ಕಾಣುತ್ತದೆ' ಎಂದು ಕಾರ್ತಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Dinesh Karthik clearly not keen to have his Sky contract renewed ... pic.twitter.com/SYbEKH0Sae
— Jason Mellor (@jmelloruk1) July 1, 2021
ಈ ಕುರಿತು ಹೇಳಿಕೆ ನೀಡಿರುವ ಕಾರ್ತಿಕ್, 'ಕಳೆದ ಪಂದ್ಯದಲ್ಲಿ ಏನಾಯಿತು ಎಂಬುದಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಲು ಬಯಸುತ್ತೇನೆ. ನಿಜವಾಗಿಯೂ ನಾನಿದನ್ನು ಉದ್ದೇಶಿಸಿದ್ದಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಇದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ಖಂಡಿತವಾಗಿಯೂ ಈ ವಿಷಯ ಸರಿಯಲ್ಲ' ಎಂದಿದ್ದಾರೆ.
'ನಿಜವಾಗಿಯೂ ವಿಷಾದವಿದೆ, ಇದು ಮತ್ತೆ ಸಂಭವಿಸಬಾರದು. ಹಾಗೇ ಹೇಳಿದ್ದಕ್ಕಾಗಿ ಅಮ್ಮ ಹಾಗೂ ಹೆಂಡತಿಯಿಂದ ಸಾಕಷ್ಟು ಬೈಗುಳ ಕೇಳಿಸಿಕೊಂಡೆ' ಎಂದು ಹೇಳಿದರು.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ತಿಕ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.