ಗುರುವಾರ , ಆಗಸ್ಟ್ 18, 2022
23 °C
ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಭಾರತ–ಇಂಗ್ಲೆಂಡ್ ಮುಂಚೂಣಿಯಲ್ಲಿವೆ: ಚಾಪೆಲ್

ಆಸ್ಟ್ರೇಲಿಯಾದ ಮಾದರಿ ಅನುಸರಿಸಿದ ದ್ರಾವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಕ್ರಿಕೆಟ್‌ನಲ್ಲಿ ಪ್ರತಿಭಾ ಶೋಧ ಮತ್ತು ಪ್ರೋತ್ಸಾಹಕ್ಕಾಗಿ ಆಸ್ಟ್ರೇಲಿಯಾ ಪಾಲಿಸುತ್ತಿದ್ದ ಮಾದರಿಯನ್ನು ಅನುಸರಿಸಿದ ರಾಹುಲ್ ದ್ರಾವಿಡ್ ಭಾರತದಲ್ಲಿ ಇವತ್ತು ಯುವಪ್ರತಿಭಾವಂತರ ದೊಡ್ಡ ದಂಡನ್ನೇ ಸಿದ್ಧಗೊಳಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಯುವಪ್ರತಿಭೆಗಳ ಶೋಧ, ತರಬೇತಿ ಮತ್ತು ಪ್ರೋತ್ಸಾಹಕ್ಕಾಗಿ ಹಲವು ಉತ್ತಮ ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು. ಅವುಗಳನ್ನು ರಾಹುಲ್ ತಾವು ಕೋಚ್ ಆಗಿದ್ದಾಗ ಅನುಸರಿಸಿಕೊಂಡು ಯಶಸ್ವಿಯಾದರು. ಅದರಿಂದಾಗಿ ಇವತ್ತು ಭಾರತವು ಯುವ ಪ್ರತಿಭೆಗಳ ಶೋಧದ ವಿಷಯದಲ್ಲಿ ಉನ್ನತ ಸ್ಥಾನದಲ್ಲಿದೆ. ಈ ವಿಷಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ದೇಶಗಳು ಆಸ್ಟ್ರೇಲಿಯಾವನ್ನೂ ಹಿಂದಿಕ್ಕಿವೆ‘ ಎಂದು ಅವರು ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

2016ರಿಂದ 2019ರವರೆಗೆ ಭಾರತ ಎ ಮತ್ತು 19 ವರ್ಷದೊಳಗಿನವರ ಕ್ರಿಕೆಟ್ ತಂಡಗಳಿಗೆ ದ್ರಾವಿಡ್ ಮುಖ್ಯ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ಹಲವಾರು ಯುವಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಕಾರಣರಾಗಿದ್ದರು.  ಆ ಸಂದರ್ಭದಲ್ಲಿ ದ್ರಾವಿಡ್ ಬಳಿ ತರಬೇತಿಗೊಂಡ ಕೆಲವು ಆಟಗಾರರು  ಈಗ ಭಾರತ ತಂಡದಲ್ಲಿ ಆಡುತ್ತಿದ್ದಾರೆ.

‘ಯುವ ಆಟಗಾರರನ್ನು ಬೆಳೆಸುವ ವಿಷಯದಲ್ಲಿ ಆಸ್ಟ್ರೇಲಿಯಾಗೆ ಭವ್ಯವಾದ ಇತಿಹಾಸವಿದೆ. ಆದರೆ, ಈ ವ್ಯವಸ್ಥೆಯು ಕಳೆದ ಕೆಲವು ವರ್ಷಗಳಲ್ಲಿ ಬದಲಾಗಿದೆ. ಪ್ರತಿಭೆ ಇದ್ದರೂ ಕೆಲವು ಯುವ ಆಟಗಾರರು ಅವಕಾಶಗಳ ಕೊರತೆಯಿಂದ ಗೊಂದಲದಲ್ಲಿದ್ದಾರೆ. ಇದು ಒಳ್ಳೆಯದಲ್ಲ. ದೇಶಿ ಕ್ರಿಕೆಟ್ ವಿಭಾಗವು ಬಲಿಷ್ಠಗೊಳ್ಳಬೇಕು‘ ಎಂದು ಚಾಪೆಲ್ ಸಲಹೆ ನೀಡಿದ್ದಾರೆ.

‘ಈಚೆಗೆ ಬ್ರಿಸ್ಬೆನ್‌ ಟೆಸ್ಟ್‌ನಲ್ಲಿ ಐತಿಹಾಸಿಕ ಜಯಗಳಿಸಿದ ಭಾರತ ತಂಡವನ್ನು ನೋಡಿದರೆ, ಆ ದೇಶದ ಯುವಶಕ್ತಿಯ ಬಗ್ಗೆ ತಿಳಿಯುತ್ತದೆ. ಆ ಪಂದ್ಯ ನೋಡಿದವರೆಲ್ಲರೂ ಇದು ಭಾರತದ ಎರಡನೇ ತಂಡ ಎಂದು ಉದ್ಗರಿಸಿದ್ದರು. ಅವರಲ್ಲಿ ಬಹುತೇಕರು ಇಂಡಿಯಾ ಎ ತಂಡದಲ್ಲಿ  ಮಾತ್ರ ಆಡಿದ್ದವರು. ವಿಭಿನ್ನವಾದ ವಾತಾವರಣ ಮತ್ತು ಸವಾಲುಗಳನ್ನು ಅವರು ಎದುರಿಸಿದ್ದರು‘ ಎಂದು ಚಾಪೆಲ್ ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು