ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ 8 K.G. ಮಟನ್‌ ತಿನ್ನುವರು; ಪಾಕ್‌ ತಂಡದ ಫಿಟ್‌ನೆಸ್‌ ಬಗ್ಗೆ ಅಕ್ರಮ್ ಗರಂ

Published 24 ಅಕ್ಟೋಬರ್ 2023, 13:41 IST
Last Updated 24 ಅಕ್ಟೋಬರ್ 2023, 13:41 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದ ಕೈಯಲ್ಲಿ ಎದುರಾದ ಅನಿರೀಕ್ಷಿತ ಸೋಲು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪಾಕ್‌ ತಂಡದ ಆಟಗಾರರ ಪ್ರದರ್ಶನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಪಾಕ್‌ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಕೂಡ ಕಿಡಿಕಾರಿದ್ದಾರೆ. ‘ಎ ಸ್ಪೋರ್ಟ್ಸ್‌’ ಚಾನೆಲ್‌ಗೆ ಸಂದರ್ಶನ ನೀಡಿರುವ ಅವರು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಟಗಾರರ ಫಿಟ್‌ನೆಸ್‌ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಅವರು, ದಿನಕ್ಕೆ 8 ಕೆ.ಜಿ. ಮಟನ್‌ ತಿನ್ನುವರು ಫಿಟ್‌ನೆಸ್‌ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ.

ಅಫ್ಗಾನಿಸ್ತಾನ ಎದುರಿನ ಸೋಲಿನಿಂದ ಮುಜುಗರ ಉಂಟಾಗಿದೆ. ಅಫ್ಗನ್‌ ತಂಡ ಎರಡು ವಿಕೆಟ್‌ ಕಳೆದುಕೊಂಡು 280ಕ್ಕೂ ಅಧಿಕ ರನ್‌ ಬೆನ್ನಟ್ಟಿರುವುದು ದೊಡ್ಡ ಸಾಧನೆಯೇ ಸರಿ ಎಂದಿದ್ದಾರೆ.

ಈ ಪಂದ್ಯದಲ್ಲಿ ಪಾಕ್‌ ತಂಡದ ಫೀಲ್ಡಿಂಗ್‌, ಅವರ ಫಿಟ್‌ನೆಸ್‌ ಮಟ್ಟ ಹೇಗಿತ್ತು ಎಂಬುದನ್ನು ನೋಡಿ. ಇವರು ಎರಡು ವರ್ಷಗಳಿಂದ ಫಿಟ್‌ನೆಸ್‌ ಪರೀಕ್ಷೆ ಎದುರಿಸಿಲ್ಲ ಎಂದು ಕಳೆದ ಮೂರು ವಾರಗಳಿಂದ ನಾಣು ಹೇಳುತ್ತಾ ಬಂದಿದ್ದೇನೆ ಎಂದರು.

ಈ ಆಟಗಾರರು ಪ್ರತಿದಿನ 8 ಕೆ.ಜಿ. ಮಟನ್ ತಿನ್ನುವಂತೆ ಕಾಣಿಸುತ್ತದೆ. ಫಿಟ್‌ನೆಸ್‌ ಪರೀಕ್ಷೆ ಬೇಡವೇ?’ ಎಂದು ‘ಎ ಸ್ಪೋರ್ಟ್ಸ್‌’ ಚಾನೆಲ್‌ಗೆ ತಿಳಿಸಿದ್ದಾರೆ.

ಮೊದಲ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದಿದ್ದ ಬಾಬರ್‌  ಅಜಂ ಬಳಗ, ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದೆ. ಚೆನ್ನೈನಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಹಷ್ಮತ್‌ಉಲ್ಲಾ ಶಾಹಿದಿ ಬಳಗವು ಪಾಕ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಅಫ್ಗನ್‌ ತಂಡಕ್ಕೆ ಪಾಕ್‌ ಎದುರು ದೊರೆತ ಮೊದಲ ಜಯ ಇದು. ಈ ಹಿಂದೆ ಏಳು ಸಲ ಪೈಪೋಟಿ ನಡೆಸಿದ್ದರೂ ಗೆಲುವು ದಕ್ಕಿರಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 ರನ್‌ ಪೇರಿಸಿತು. 92 ಎಸೆತಗಳಲ್ಲಿ 74 ರನ್‌ ಗಳಿಸಿದ ಬಾಬರ್‌ ಅಜಂ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಶಾದಾಬ್‌ ಖಾನ್‌ ಮತ್ತು ಇಫ್ತಿಕಾರ್‌ ಅಹಮದ್‌ ಅವರು ಗಮನ ಸೆಳೆದರು. 49 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ಯುವ ಸ್ಪಿನ್ನರ್‌ ನೂರ್‌ ಅಹ್ಮದ್‌ ಪಾಕ್‌ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.

ಅಫ್ಗನ್‌ ತಂಡಕ್ಕೆ ಈ ಗುರಿ ಸವಾಲಾಗಿ ಪರಿಣಮಿಸಲೇ ಇಲ್ಲ. 49 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಐತಿಹಾಸಿಕ ಗೆಲುವು ದಾಖಲಿಸಿತು. ರಹಮಾನುಲ್ಲಾ ಗುರ್ಬಾಜ್‌ 65, ಮತ್ತು ಇಬ್ರಾಹಿಂ ಜದ್ರಾನ್ 87 ಮೊದಲ ವಿಕೆಟ್‌ಗೆ 130 ರನ್‌ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ರಹಮತ್‌ ಶಾ 77 ನಾಯಕ ಹಷ್ಮತ್‌ ಉಲ್ಲಾ 48 ಕಲೆಹಾಕಿ ತಂಡವನ್ನು ಸ್ಮರಣೀಯ ಜಯದತ್ತ ಕೊಂಡೊಯ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT