ಸೋಮವಾರ, ಜನವರಿ 17, 2022
21 °C
ನ್ಯೂಜಿಲೆಂಡ್‌ ನೆಲದಲ್ಲಿ ಮೊದಲ ಗೆಲುವಿನ ಶ್ರೇಯ

ಇಬಾದತ್ ಹುಸೇನ್ ಮಿಂಚು: ವಿಶ್ವ ಟೆಸ್ಟ್‌ ಚಾಂಪಿಯನ್‌ಗೆ ಬಾಂಗ್ಲಾ ಆಘಾತ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೌಂಟ್‌ ಮಾಂಗನೂಯಿ: ವೇಗದ ಬೌಲರ್‌ ಇಬಾದತ್‌ ಹುಸೇನ್‌ ದಾಳಿಗೆ ನಲುಗಿದ ನ್ಯೂಜಿಲೆಂಡ್‌ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಮಣಿಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ ತಂಡದ ವಿರುದ್ಧ ಬುಧವಾರ ಎಂಟು ವಿಕೆಟ್‌ಗಳಿಂದ ಗೆದ್ದ ಪ್ರವಾಸಿ ಪಡೆ, ನ್ಯೂಜಿಲೆಂಡ್‌ ನೆಲದಲ್ಲಿ ಮೊದಲ ಜಯದ ಶ್ರೇಯ ತನ್ನದಾಗಿಸಿಕೊಂಡಿತು.

ಮಂಗಳವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ 39 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದ್ದ ಇಬಾದತ್‌ (46ಕ್ಕೆ 6), ತಂಡವನ್ನು ಜಯದ ಅಂಚಿಗೆ ತಂದು ನಿಲ್ಲಿಸಿದ್ದರು. ಬುಧವಾರ ಮತ್ತೆರಡು ವಿಕೆಟ್‌ ಕಬಳಿಸಿದ ಅವರು ಆತಿಥೇಯ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. 169 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿದ ನ್ಯೂಜಿಲೆಂಡ್‌, ಬಾಂಗ್ಲಾದೇಶ ವಿರುದ್ಧ ಕನಿಷ್ಠ ಸ್ಕೋರ್ ದಾಖಲಿಸಿತು.

ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಹಿನ್ನಡೆ ಅನುಭವಿಸಿದ್ದ ನ್ಯೂಜಿಲೆಂಡ್‌ ತಂಡವು ಕೇವಲ 40 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಬಾಂಗ್ಲಾ ತಂಡವು ಎರಡು ವಿಕೆಟ್‌ ಕಳೆದುಕೊಂಡು ಜಯದ ಗೆರೆ ದಾಟಿತು. ನಜ್ಮುಲ್ ಹುಸೇನ್‌ (17) ಹಾಗೂ ನಾಯಕ ಮೋಮಿನುಲ್ ಹಕ್‌ (ಔಟಾಗದೆ 13) ತಂಡದ ಗೆಲುವನ್ನು ಸುಲಭವಾಗಿಸಿದರು.

ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ನಲ್ಲಿ 75 ರನ್‌ ನೀಡಿ ಒಂದು ವಿಕೆಟ್‌ ಗಳಿಸಿದ್ದ ಇಬಾದತ್‌, ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರಿಸಿದ್ದರು.

ಐದು ವಿಕೆಟ್‌ಗೆ 145 ರನ್‌ಗಳಿಂದ ನ್ಯೂಜಿಲೆಂಡ್‌ ಆಟ ಮುಂದುವರಿಸಿತು. ಮಂಗಳವಾರ ಕ್ರೀಸ್‌ನಲ್ಲಿದ್ದ ಅನುಭವಿ ರಾಸ್‌ ಟೇಲರ್‌ (40) ಬುಧವಾರ ಮತ್ತೆ ಮೂರು ರನ್‌ ಸೇರಿಸಿ ಇಬಾದತ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಕೈಲ್ ಜೆಮಿಸನ್‌ (0) ವಿಕೆಟ್ ಕೂಡ ಇಬಾದತ್ ಪಾಲಾಯಿತು. ರಚಿನ್ ರವೀಂದ್ರ (16) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಬಾಂಗ್ಲಾದೇಶಕ್ಕೆ ತವರಿನ ಹೊರಗೆ ಇದು ಕೇವಲ ಆರನೇ ಹಾಗೂ ಅಗ್ರ ಐದರೊಳಗಿನ ರ‍್ಯಾಂಕಿನ ತಂಡದ ಎದುರು ಮೊದಲ ಗೆಲುವಾಗಿದೆ. ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಸ್ಥಾನ ಒಂಬತ್ತು. ಈ ಸೋಲಿನೊಂದಿಗೆ ತವರಿನಲ್ಲಿ ನ್ಯೂಜಿಲೆಂಡ್ ತಂಡದ ಸತತ 17 ಪಂದ್ಯಗಳ ಗೆಲುವಿನ ಸರಪಳಿ ತುಂಡರಿಸಿತು.

ಸಂಕ್ಷಿ‍ಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್ 328, ಬಾಂಗ್ಲಾದೇಶ: 458, ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 73.4 ಓವರ್‌ಗಳಲ್ಲಿ 169 (ವಿಲ್ ಯಂಗ್ 69, ರಾಸ್ ಟೇಲರ್ 40, ರಚಿನ್ ರವೀಂದ್ರ 16; ತಸ್ಕಿನ್‌ ಅಹಮದ್‌ 36ಕ್ಕೆ 3,  ಇಬಾದತ್ ಹುಸೇನ್ 46ಕ್ಕೆ 6). ಬಾಂಗ್ಲಾದೇಶ: 16.5 ಓವರ್‌ಗಳಲ್ಲಿ 2 ವಿಕೆಟ್‌ಗೆ 42 (ನಜ್ಮುಲ್ ಹುಸೇನ್‌ 17, ಮೋಮಿನುಲ್ ಹಕ್‌ ಔಟಾಗದೆ 13; ಟಿಮ್ ಸೌಥಿ 21ಕ್ಕೆ 1, ಕೈಲ್ ಜೆಮಿಸನ್‌ 12ಕ್ಕೆ 1). ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ ಎಂಟು ವಿಕೆಟ್‌ಗಳ ಗೆಲುವು, ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ. ಎರಡನೇ ಟೆಸ್ಟ್ ಭಾನುವಾರದಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು