ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ENG vs PAK Final: ಪಾಕಿಸ್ತಾನ ಮಣಿಸಿದ ಇಂಗ್ಲೆಂಡ್ ಚಾಂಪಿಯನ್

Last Updated 13 ನವೆಂಬರ್ 2022, 18:38 IST
ಅಕ್ಷರ ಗಾತ್ರ

ಮೆಲ್ಬರ್ನ್: ಮೂರು ದಶಕಗಳ ಹಿಂದಿನ ಇತಿಹಾಸ ಮರುಕಳಿಸಲಿಲ್ಲ. ಮೆಲ್ಬರ್ನ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜೊಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಬಳಗವು ಚರಿತ್ರೆಯ ಪುಸ್ತಕದಲ್ಲಿ ನೂತನ ಅಧ್ಯಾಯ ಬರೆಯಿತು.

ಭಾನುವಾರ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಎದುರು 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಇಂಗ್ಲೆಂಡ್ ಟಿ20 ವಿಶ್ವಕಪ್ ತನ್ನದಾಗಿಸಿಕೊಂಡಿತು. ಮೂವತ್ತು ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ನಡೆದಿತ್ತು. ಆಗಲೂ ಪಾಕ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಇಮ್ರಾನ್ ಖಾನ್ ನಾಯಕತ್ವದ ಪಾಕ್ ಚಾಂಪಿಯನ್ ಆಗಿತ್ತು.

ಈ ಟೂರ್ನಿಯ ಸೆಮಿಫೈನಲ್‌ಗಳಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ಎದುರು ಹಾಗೂ ಇಂಗ್ಲೆಂಡ್ ತಂಡವು ಭಾರತದ ಎದುರು ಗೆದ್ದು ಫೈನಲ್ ಪ್ರವೇಶಿಸಿದಾಗ 30 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವ ನಿರೀಕ್ಷೆ ಪಾಕ್ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಇಂಗ್ಲೆಂಡ್ ತಂಡದ ವೇಗಿ ಸ್ಯಾಮ್ ಕರನ್ (12ಕ್ಕೆ3) ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ (52; 49ಎ, 4X5, 6X1) ಇಂಗ್ಲೆಂಡ್ ಗೆಲುವಿನ ರೂವಾರಿಗಳಾದರು.

ಅಭಿಮಾನಿಗಳು ಕಿಕ್ಕಿರಿದು ಸೇರಿದ್ದ ಎಂಸಿಜಿಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಯಾಮ ಕರನ್ ಹಾಗೂ ಆದಿಲ್ ರಶೀದ್ (22ಕ್ಕೆ2) ಅವರ ಅಮೋಘ ಬೌಲಿಂಗ್‌ ಮುಂದೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕುಸಿದರು. ಇದರಿಂದಾಗಿ ಪಾಕ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 137 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಶಾಹೀನ್ ಆಫ್ರಿದಿ ಮೊದಲ ಓವರ್‌ನಲ್ಲಿಯೇ ಪೆಟ್ಟುಕೊಟ್ಟರು. ಇನ್ನೊಂದು ಬದಿಯಿಂದ ಹ್ಯಾರಿಸ್ ರವೂಫ್ (23ಕ್ಕೆ2) ಪರಿಣಾಮಕಾರಿ ದಾಳಿ ನಡೆಸಿದರು. ಇದರಿಂದಾಗಿ ತಂಡವು 5.3 ಓವರ್‌ಗಳಲ್ಲಿ 45 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಬೆನ್ ಸ್ಟೋಕ್ಸ್ ಆತಂಕ ದೂರ ಮಾಡಿದರು. ಅವರಿಗೆ ಹ್ಯಾರಿ ಬ್ರೂಕ್ ಹಾಗೂ ಮೋಯಿನ್ ಅಲಿ ಕೂಡ ಜೊತೆ ನೀಡಿದರು. ಇದರಿಂದಾಗಿ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 138 ರನ್‌ ಗಳಿಸಿ ಗೆದ್ದಿತು. ಚುಟುಕು ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡವು ಎರಡನೇ ಬಾರಿ ಪ್ರಶಸ್ತಿ ಜಯಿಸಿತು. 2019ರಲ್ಲಿ ಏಕದಿನ ಕ್ರಿಕೆಟ್ ಫೈನಲ್‌ನಲ್ಲಿಯೂ ಇಂಗ್ಲೆಂಡ್ ಜಯಿಸಲು ಬೆನ್ ಸ್ಟೋಕ್ಸ್‌ ಅವರ ಆಟವೇ ಕಾರಣವಾಗಿತ್ತು.

ತೊಡೆಯ ಸ್ನಾಯುಸೆಳೆತದಿಂದ ಬಳಲಿದ ಆಫ್ರಿದಿಗೆ ಕೇವಲ 2.1 ಓವರ್‌ಗಳ ಬೌಲಿಂಗ್ ಮಾಡಲು ಸಾಧ್ಯವಾಯಿತು. ನಸೀಂ ಶಾ ಹಾಗೂ ಮೊಹಮ್ಮದ್ ವಾಸೀಂ ಜೂನಿಯರ್ ದುಬಾರಿಯಾದರು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ತಡೆಯೊಡ್ಡಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT