ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

Last Updated 25 ಆಗಸ್ಟ್ 2020, 16:40 IST
ಅಕ್ಷರ ಗಾತ್ರ

ಸೌತಾಂಪ್ಟನ್: ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿ ವಿಕೆಟ್‌ ಉರುಳಿಸಿದ ಇಂಗ್ಲೆಂಡ್ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 600 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್‌ ಎನಿಸಿಕೊಂಡರು.

ಇಂಗ್ಲೆಂಡ್‌–ಪಾಕಿಸ್ತಾನ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಕೊನೆಯ ದಿನ ಆ್ಯಂಡರ್ಸನ್‌ ಈ ದಾಖಲೆ ಬರೆದರು.

38 ವರ್ಷ ವಯಸ್ಸಿನ ವೇಗಿ ಇದುವರೆಗೆ ಒಟ್ಟು 156 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಒಟ್ಟು 291 ಇನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿರುವ ಅವರು 26.77ರ ಸರಾಸರಿಯಲ್ಲಿ ಇಷ್ಟು ವಿಕೆಟ್ ಪಡೆದಿದ್ದಾರೆ.

ಒಟ್ಟಾರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜೇಮ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್‌ (800), ಆಸ್ಟ್ರೇಲಿಯಾದ ಶೇನ್‌ ವಾರ್ನ್‌ (708) ಮತ್ತು ಭಾರತದ ಅನಿಲ್‌ ಕುಂಬ್ಳೆ (619) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಸದ್ಯ ಇಂಗ್ಲೆಂಡ್‌ ಪರ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿರುವುದಷ್ಟೇ ಅಲ್ಲದೆ,ಆ್ಯಂಡರ್ಸನ್‌ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಇನ್ನು ಕೇವಲ 5 ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದರೆ ತಮ್ಮ ತಂಡದ‌ ಪರ ಅತಿಹೆಚ್ಚು ಪಂದ್ಯವಾಡಿದ ಬೌಲರ್‌ ಎನಿಸಿಕೊಳ್ಳಲಿದ್ದಾರೆ. 161 ಪಂದ್ಯಗಳನ್ನು ಆಡಿರುವ ಆಲಿಸ್ಟರ್‌ ಕುಕ್‌ ಸದ್ಯ ಮೊದಲ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿರುವ ಮತ್ತೊಬ್ಬ ವೇಗಿ ಸ್ಟುವರ್ಟ್‌ ಬ್ರಾಡ್‌ ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದರು. 143 ಪಂದ್ಯಗಳಿಂದ ಬ್ರಾಡ್‌ 514 ವಿಕೆಟ್ ಉರುಳಿಸಿದ್ದಾರೆ.

ಇಂಗ್ಲೆಂಡ್–ಪಾಕ್ ಪಂದ್ಯದ ಸ್ಕೋರ್ ವಿವರ
ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್‌ ಈಗಾಗಲೇ ಒಂದು ಪಂದ್ಯವನ್ನು ಗೆದ್ದು ಸರಣಿಯಲ್ಲಿ 1–0 ಮುನ್ನಡೆಯಲ್ಲಿದೆ.

ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿಜಾಕ್ ಕ್ರಾಲಿ ಅವರ ದ್ವಿಶತಕ (267) ಮತ್ತು ಜೋಸ್ ಬಟ್ಲರ್ ಅವರ ಶತಕದ (152) ನೆರವಿನಿಂದ ಇಂಗ್ಲೆಂಡ್‌ಎಂಟು ವಿಕೆಟ್‌ಗಳಿಗೆ 583 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಅದಕ್ಕುತ್ತರವಾಗಿ ಪಾಕಿಸ್ತಾನ 273 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಬಳಿಕ ಫಾಲೊ ಆನ್‌ಗೆ ಒಳಗಾದ ಪಾಕ್‌ ಎರಡನೇ ಇನಿಂಗ್ಸ್‌ ಆರಂಭಿಸಿದೆ. ಕೊನೆಯ ದಿನದ ಮೂರನೇ ಅವಧಿಯ ಆಟ ಮುಂದುವರಿದಿದ್ದು, ಪಾಕ್‌ ಪಡೆ ಸದ್ಯ 77 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿದೆ.

ಬಾಬರ್‌ ಅಜಂ (48) ಮತ್ತು ಅಸಾದ್‌ ಸಾದಿಕ್‌ (15) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT