ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ashes Series- ಇಂಗ್ಲೆಂಡ್‌ ತಂಡದ ಬಿಗಿಹಿಡಿತ

ಆ್ಯಷಸ್‌ ಟೆಸ್ಟ್‌: ಬೇಸ್ಟೊ 99 ರನ್‌; ಆಸ್ಟ್ರೇಲಿಯಾ ಹೋರಾಟ
Published 21 ಜುಲೈ 2023, 21:05 IST
Last Updated 21 ಜುಲೈ 2023, 21:05 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ತಂಡದವರು ಆ್ಯಷಸ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಹಿಡಿತ ಬಿಗಿಗೊಳಿಸಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಆತಂಕ ಎದುರಾಗಿದೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ, ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 592 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ 275 ರನ್‌ಗಳ ಮುನ್ನಡೆ ಗಳಿಸಿತು.

ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳಿಗೆ 113 ರನ್‌ ಗಳಿಸಿದೆ. ಇನ್ನೂ 162 ರನ್‌ಗಳಿಂದ ಹಿನ್ನಡೆಯಲ್ಲಿರುವ ಪ್ಯಾಟ್‌ ಕಮಿನ್ಸ್‌ ಬಳಗ ಒತ್ತಡಕ್ಕೆ ಸಿಲುಕಿದೆ.

ಮಾರ್ಕ್ ವುಡ್‌ (17ಕ್ಕೆ 3) ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಅವರು ಉಸ್ಮಾನ್‌ ಖ್ವಾಜಾ, ಸ್ಟೀವ್‌ ಸ್ಮಿತ್‌ ಮತ್ತು ಟ್ರಾವಿಸ್‌ ಹೆಡ್‌ ಅವರ ವಿಕೆಟ್‌ ಪಡೆದರು. ಡೇವಿಡ್‌ ವಾರ್ನರ್‌ ಅವರನ್ನು ಕ್ರಿಸ್‌ ವೋಕ್ಸ್‌ ಔಟ್‌ ಮಾಡಿದರು. ಮಾರ್ನಸ್‌ ಲಾಬುಷೇನ್‌ (ಬ್ಯಾಟಿಂಗ್‌ 44) ಹೆಚ್ಚಿನ ವಿಕೆಟ್‌ ಬೀಳದಂತೆ ನೋಡಿಕೊಂಡರು.

ಬೇಸ್ಟೊ ಮಿಂಚು: ಇದಕ್ಕೂ ಮುನ್ನ 4 ವಿಕೆಟ್‌ಗಳಿಗೆ 384 ರನ್‌ಗಳಿಂದ ಆಟ ಮುಂದುವರಿಸಿದ ಆತಿಥೇಯ ತಂಡದ ಬ್ಯಾಟರ್‌ಗಳು ಶುಕ್ರವಾರವೂ ಅಕ್ರಮಣಕಾರಿ ಆಟವಾಡಿದರು. ಬೇಸ್ಟೊ ಅವರು 81 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ ಅಜೇಯ 99 ರನ್‌ ಗಳಿಸಿದರು. ಜತೆಗಾರರು ಇಲ್ಲದ ಕಾರಣ ಶತಕ ಗಳಿಸುವ ಅವಕಾಶ ಕೈತಪ್ಪಿಹೋಯಿತು.

ಬೇಸ್ಟೊ ಅವರು ಜೇಮ್ಸ್‌ ಆ್ಯಂಡರ್‌ಸನ್ (5) ಅವರೊಂದಿಗೆ 9ನೇ ವಿಕೆಟ್‌ಗೆ 66 ರನ್‌ ಕಲೆಹಾಕಿದರು. ಆದರೆ ಆ್ಯಂಡರ್‌ಸನ್‌ ಅವರನ್ನು ಎಲ್‌ಬಿ ಬಲೆಯಲ್ಲಿ ಬೀಳಿಸಿದ ಕ್ಯಾಮರಾನ್‌ ಗ್ರೀನ್‌, ಇಂಗ್ಲೆಂಡ್‌ ಇನಿಂಗ್ಸ್‌ಗೆ ತೆರೆ ಎಳೆದರು. ಬೇಸ್ಟೊ, ಒಂದು ರನ್‌ ಅಂತರದಲ್ಲಿ ಶತಕ ಗಳಿಸುವ ಅವಕಾಶ ಕಳೆದುಕೊಂಡರು.

ಬೇಸ್ಟೊ ಅವರು ಆ್ಯಷಸ್‌ ಟೆಸ್ಟ್‌ ಇತಿಹಾಸದಲ್ಲಿ ಔಟಾಗದೆ 99 ರನ್‌ ಗಳಿಸಿದ ಎರಡನೇ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಸ್ಟೀವ್‌ ವಾ (ಪರ್ತ್‌ನಲ್ಲಿ, 1995) ಮಾತ್ರ 99 ರನ್‌ಗಳೊಂದಿಗೆ ಔಟಾಗದೆ ಉಳಿದಿದ್ದರು.

ಬೇಸ್ಟೊ ಅಬ್ಬರಕ್ಕೂ ಮುನ್ನ ಹ್ಯಾರಿ ಬ್ರೂಕ್ಸ್‌ (61 ರನ್‌) ಮತ್ತು ನಾಯಕ ಬೆನ್‌ ಸ್ಟೋಕ್ಸ್‌ (51 ರನ್‌) ಅವರು ಅರ್ಧಶತಕಗಳ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾಗಿದ್ದರು. ಆಸ್ಟ್ರೇಲಿಯಾ ಪರ ಜೋಶ್‌ ಹ್ಯಾಜೆಲ್‌ವುಡ್ 126 ರನ್‌ಗಳಿಗೆ 5 ವಿಕೆಟ್‌ ಪಡದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 317. ಇಂಗ್ಲೆಂಡ್‌ 107.4 ಓವರ್‌ಗಳಲ್ಲಿ 592 (ಹ್ಯಾರಿ ಬ್ರೂಕ್‌ 61, ಬೆನ್‌ ಸ್ಟೋಕ್ಸ್‌ 51, ಜಾನಿ ಬೇಸ್ಟೊ ಔಟಾಗದೆ 99, ಜೋಶ್‌ ಹ್ಯಾಜೆಲ್‌ವುಡ್ 126ಕ್ಕೆ 5, ಮಿಚೆಲ್‌ ಸ್ಟಾರ್ಕ್ 137ಕ್ಕೆ 2, ಕ್ಯಾಮರಾನ್‌ ಗ್ರೀನ್‌ 64ಕ್ಕೆ 2) ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ 41 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 113 (ಉಸ್ಮಾನ್‌ ಖ್ವಾಜಾ 18, ಡೇವಿಡ್‌ ವಾರ್ನರ್‌ 28, ಮಾರ್ನಸ್‌ ಲಾಬುಷೇನ್‌ ಬ್ಯಾಟಿಂಗ್‌ 44, ಸ್ಟೀವ್‌ ಸ್ಮಿತ್‌ 17, ಟ್ರಾವಿಸ್‌ ಹೆಡ್‌ 1, ಮಾರ್ಕ್‌ ವುಡ್‌ 17ಕ್ಕೆ 3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT