ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಕೊರೊನಾ ಕಾಲದ ಮೊದಲ ’ಕಿರೀಟ‘

ಟೆಸ್ಟ್ ಕ್ರಿಕೆಟ್: ಜೋ ರೂಟ್ ಬಳಗಕ್ಕೆ ವೆಸ್ಟ್ ಇಂಡೀಸ್ ಎದುರು 2–1ರಿಂದ ಜಯ
Last Updated 28 ಜುಲೈ 2020, 15:27 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಕೊರೊನಾ ಕಾಲದ ಮೊಟ್ಟಮೊದಲ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ ಇಂಗ್ಲೆಂಡ್ ಗೆಲುವಿನ ಸಂಭ್ರಮವನ್ನೂ ಆಚರಿಸಿತು.

ವೆಸ್ಟ್ ಇಂಡೀಸ್ ವಿರುದ್ಧ ಮಂಗಳವಾರ ಮುಕ್ತಾಯವಾದ ಸರಣಿಯಲ್ಲಿ 2–1ರಿಂದ ಜಯಿಸಿತು. ಕೊನೆಯ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ (36ಕ್ಕೆ4) ಮತ್ತು ಕ್ರಿಸ್ ವೋಕ್ಸ್ (50ಕ್ಕೆ5) ಅವರ ವೇಗದ ದಾಳಿಗೆ ವಿಂಡೀಸ್ ಬಳಗವು 269 ರನ್‌ಗಳಿಂದ ಸೋಲಿನ ಕಹಿ ಅನುಭವಿಸಿತು. 398 ರನ್‌ಗಳ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡವು 37.1 ಓವರ್‌ಗಳಲ್ಲಿ 129 ರನ್‌ ಗಳಿಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ನಾಲ್ವರು ಆಟಗಾರರ ಅರ್ಧಶತಕಗಳ ನೆರವಿನಿಂದ 369 ರನ್‌ಗಳ ಮೊತ್ತ ಪೇರಿಸಿತ್ತು. ಅದಕ್ಕುತ್ತರವಾಗಿ ಜೇಸನ್ ಹೋಲ್ಡರ್ ಬಳಗವು ಕೇವಲ 197 ರನ್‌ಗಳಿಸಿ ಔಟಾಗಿತ್ತು. ಉತ್ತಮ ಮುನ್ನಡೆ ಗಳಿಸಿದ್ದ ಇಂಗ್ಲೆಂಡ್ ತಂಡವು 2 ವಿಕೆಟ್‌ಗಳಿಗೆ 226 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ ಬಳಗವು 6 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 10 ರನ್ ಗಳಿಸಿತ್ತು. ಆದರೆ ನಾಲ್ಕನೇ ದಿನವಾದ ಸೋಮವಾರ ಮಳೆ ಬಂದಿದ್ದರಿಂದ ಆಟ ನಡೆದಿರಲಿಲ್ಲ. ಕೊನೆಯ ದಿನದಾಟದಲ್ಲಿ ತಾಳ್ಮೆಯಿಂದ ಆಡಿ ಪಂದ್ಯ ಡ್ರಾ ಮಾಡಿಕೊಳ್ಳುವ ವಿಂಡೀಸ್ ಆಸೆಗೆ ಬ್ರಾಡ್ ಮತ್ತು ವೋಕ್ಸ್‌ ತಣ್ಣೀರು ಸುರಿದರು!

ಕೊರೊನಾ ಸೋಂಕಿನ ಪ್ರಸರಣ ಮತ್ತು ಲಾಕ್‌ಡೌನ್‌ ನಿಂದಾಗಿ ಸುಮಾರು ನಾಲ್ಕು ತಿಂಗಳು ವಿಶ್ವದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆದಿರಲಿಲ್ಲ. ಐಸಿಸಿಯು ರೂಪಿಸಿದ ಜೀವ ಸುರಕ್ಷಾ ನಿಯಮಗಳನ್ನು ಅನುಷ್ಠಾನಗೊಳಿಸಿಕೊಂಡು ನಡೆದ ಮೊದಲ ಟೂರ್ನಿ ಇದಾಗಿತ್ತು. ಜೇಸನ್ ಹೋಲ್ಡರ್ ನಾಯಕತ್ವದ ವಿಂಡೀಸ್ ತಂಡವು ಜೂನ್ 9ರಂದೇ ಇಂಗ್ಲೆಂಡ್‌ಗೆ ಹೋಗಿ ಕ್ವಾರಂಟೈನ್ ಆಗಿತ್ತು. ಜುಲೈ 8ರಿಂದ ಮೊದಲ ಪಂದ್ಯ ಆರಂಭವಾಗಿತ್ತು. ಅದರಲ್ಲಿ ವಿಂಡೀಸ್ ಜಯಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ ಅವರ ಆಲ್‌ರೌಂಡ್ ಆಟಕ್ಕೆ ಆತಿಥೇಯ ತಂಡವು ಜಯಭೇರಿ ಬಾರಿಸಿತ್ತು. ಕಾಕತಾಳೀಯವೆಂಬಂತೆ ಮೂರು ಪಂದ್ಯಗಳಲ್ಲಿಯೂ ಮಳೆಯಿಂದಾಗಿ ಬಹುತೇಕ ಒಂದೊಂದು ದಿನದ ಆಟ ನಷ್ಟವಾಗಿತ್ತು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ಇಂಗ್ಲೆಂಡ್: 369, ವೆಸ್ಟ್ ಇಂಡೀಸ್ 197, ಎರಡನೇ ಇನಿಂಗ್ಸ್: ಇಂಗ್ಲೆಂಡ್ 2ಕ್ಕೆ226 ಡಿಕ್ಲೆರ್ಡ್, ವೆಸ್ಟ್ ಇಂಡೀಸ್: 37.1 ಓವರ್‌ಗಳಲ್ಲಿ 129 (ಶಾಯ್ ಹೋಪ್ 31, ಶಾಮ್ರಾ ಬ್ರೂಕ್ಸ್‌ 22, ಜರ್ಮೈನ್ ಬ್ಲ್ಯಾಕ್‌ವುಡ್ 23,ಸ್ಟುವರ್ಟ್ ಬ್ರಾಡ್ 36ಕ್ಕೆ4, ಕ್ರಿಸ್ ವೋಕ್ಸ್ 50ಕ್ಕೆ5) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 269 ರನ್ ಜಯ ಮತ್ತು 2–1ರಿಂದ ಸರಣಿ ಗೆಲುವು. ಸ್ಟುವರ್ಟ್‌ ಬ್ರಾಡ್ (ಪಂದ್ಯ–ಸರಣಿ ಶ್ರೇಷ್ಠ), ರಾಸ್ಟನ್ ಚೇಸ್ (ಸರಣಿ ಶ್ರೇಷ್ಠ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT