ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್ ರೈನಾಗೆ ಧೋನಿ ಬೆಂಬಲ ಇತ್ತು: ಯುವರಾಜ್ ಸಿಂಗ್

Last Updated 19 ಏಪ್ರಿಲ್ 2020, 14:10 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ತಂಡದಲ್ಲಿ ನಾಯಕತ್ವ ವಹಿಸಿದವರಿಗೆ ಸಹಜವಾಗಿಯೇ ತಮ್ಮ ಇಷ್ಟದ ಆಟಗಾರರು ಇರುತ್ತಾರೆ. ಅದೇ ರೀತಿ ಮಹೇಂದ್ರಸಿಂಗ್ ಧೋನಿ ನಾಯಕರಾಗಿದ್ದಾಗ ಸುರೇಶ್ ರೈನಾ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.

2011 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಭಾರತ ತಂಡದ ಆಯ್ಕೆ ಮಾಡುವಾಗ ಆಲ್‌ರೌಂಡರ್‌ಗಳಾದ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ ಅವರ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಧೋನಿ ಎದುರಿಸಿದ ಗೊಂದಲದ ಕುರಿತು ‘ಸ್ಪೋರ್ಟ್ಸ್‌ ಟಾಕ್‌’ ಆನ್‌ಲೈನ್‌ನಲ್ಲಿ ಯುವಿ ಮಾತನಾಡಿದ್ದಾರೆ.

‘ಆ ಸಂದರ್ಭದಲ್ಲಿ ರೈನಾಗೆ ಮಹಿಯ ಬೆಂಬಲ ಇತ್ತು. ಪ್ರತಿಯೊಬ್ಬ ನಾಯಕನಿಗೂ ಒಬ್ಬ ಫೆವರಿಟ್ ಆಟಗಾರ ಇರುತ್ತಾನೆ. ಆಗ ಧೋನಿಗೆ ರೈನಾ ಇದ್ದರು. ಆ ಸಂದರ್ಭದಲ್ಲಿ ಯೂಸುಫ್ ಮತ್ತು ನಾನು ಉತ್ತಮ ಫಾರ್ಮ್‌ನಲ್ಲಿದ್ದೆವು. ರೈನಾ ಅಷ್ಟೇನೂ ಲಯದಲ್ಲಿರಲಿಲ್ಲ. ಆಗ ತಂಡದಲ್ಲಿ ಎಡಗೈ ಸ್ಪಿನ್ನರ್‌ಗಳು ಇರಲಿಲ್ಲ. ಆದರೆ ನಾನು ವಿಕೆಟ್‌ ಗಳಿಸುತ್ತಿದ್ದೆ. ಆದ್ದರಿಂದ ನನ್ನನ್ನು ಕೈಬಿಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

‘2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಬಾರಿಸಿದ್ದಾಗ, ಆಸ್ಟ್ರೇಲಿಯಾದ ಕೋಚ್ ನನ್ನ ಬಳಿ ಬಂದು ಬ್ಯಾಟ್‌ನಲ್ಲಿ ಫೈಬರ್ ಇದೆಯೇ? ಎಂದು ಕೇಳಿದ್ದರು. ಅದಕ್ಕೆ ನಾನು ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದೆ. ರೆಫರಿ ಪರೀಕ್ಷೆ ಮಾಡಿದ್ದರು. ಆದರೆ ಅದರಲ್ಲಿ ಏನೂ ಇರಲಿಲ್ಲ. ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್‌ ಕೂಡ ಅಚ್ಚರಿಗೊಂಡಿದ್ದರು. ನನಗೂ ಆ ಬ್ಯಾಟ್ ಇಂದಿಗೂ ತುಂಬ ಅಚ್ಚುಮೆಚ್ಚಿನದ್ದು’ ಎಂದು ಯುವಿ ನೆನಪಿಸಿಕೊಂಡಿದ್ದಾರೆ. ‌

‘ದಾದಾ (ಸೌರವ್ ಗಂಗೂಲಿ) ನನ್ನ ನೆಚ್ಚಿನ ನಾಯಕ. ತಂಡದಲ್ಲಿದ್ದಾಗ ನನಗೆ ಬಹಳ ಬೆಂಬಲ ನೀಡಿದ್ದರು. ನನ್ನ ಪ್ರತಿಭೆ ಹೊರಹೊಮ್ಮಲು ಅವಕಾಶ ಮತ್ತು ಮಾರ್ಗದರ್ಶನ ನೀಡಿದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT