ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ | ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಸ್ಟೀವ್ ಸ್ಮಿತ್ ಬಳಗದ ಸವಾಲು

ಕ್ರಿಕೆಟ್: ವಿಶ್ವಕಪ್‌ ಟೂರ್ನಿ ಸಿದ್ಧತೆಯತ್ತ ಚಿತ್ತ; ಆಸ್ಟ್ರೇಲಿಯಾ ಬಳಗದಲ್ಲಿ ಮ್ಯಾಕ್ಸ್‌ವೆಲ್, ವಾರ್ನರ್
Last Updated 16 ಮಾರ್ಚ್ 2023, 23:54 IST
ಅಕ್ಷರ ಗಾತ್ರ

ಮುಂಬೈ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಶುಕ್ರವಾರ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಕೌಟುಂಬಿಕ ಕಾರಣಗಳಿಗಾಗಿ ಬಿಡುವು ಪಡೆದುಕೊಂಡಿರುವ ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ನಾಯಕತ್ವ ವಹಿಸಿದ್ದಾರೆ. ಇದೇ ವರ್ಷ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪೂರ್ವಭಾವಿ ಸಿದ್ದತೆಯ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ.

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಅದರಲ್ಲೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಶತಕ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧನೆಯನ್ನೂ ಮಾಡಿರುವ ಶುಭಮನ್ ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸುವುದು ಖಚಿತ. ಅವರೊಂದಿಗೆ ಕೆ.ಎಲ್. ರಾಹುಲ್ ಅಥವಾ ಇಶಾನ್ ಕಿಶನ್ ಕಣಕ್ಕಿಳಿಯಬಹುದು.

ಸೂರ್ಯಕುಮಾರ್ ಯಾದವ್ ತಮ್ಮ ತವರಿನಂಗಳದಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ತವಕದಲ್ಲಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಅವರೂ ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ನೀಡುವ ಭರವಸೆ ಇದೆ.

ವೇಗಿ ಉಮ್ರಾನ್ ಮಲಿಕ್ ಮತ್ತು ಜೈದೇವ್ ಉನದ್ಕತ್ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಗಬಹುದು. ಕಳೆದ ಐದು ಪಂದ್ಯಗಳಲ್ಲಿ 11 ವಿಕೆಟ್ ಗಳಿಸಿರುವ ಕುಲದೀಪ್‌ ಯಾದವ್ ಅವರಿಗೆ ಅವಕಾಶ ಸಿಕ್ಕರೆ ಜಡೇಜ ಮತ್ತು ಚಾಹಲ್ ಇಬ್ಬರಿಗೂ ವಿಶ್ರಾಂತಿ ಕೊಡಬಹುದು. ಐದು ಪಂದ್ಯಗಳಲ್ಲಿ 14 ವಿಕೆಟ್ ಗಳಿಸಿರುವ ಸಿರಾಜ್ ಎರಡನೇ ವೇಗಿಯಾಗಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು.

ಸ್ಪಿನ್ ಬೌಲರ್‌ಗಳ ಎದುರು ಉತ್ತಮವಾಗಿ ಆಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಭಾರತದ ಬೌಲರ್‌ಗಳಿಗೆ ಇದೆ.

ಡೇವಿಡ್ ವಾರ್ನರ್, ಗಾಯದಿಂದ ಚೇತರಿಸಿಕೊಂಡು ಬಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರು ಯಾವುದೇ ಕ್ರಮಾಂಕದಲ್ಲಿಯೂ ಕ್ರೀಸ್‌ಗೆ ಬಂದು ಮಿಂಚುವ ತಾಕತ್ತು ಹೊಂದಿದ್ದಾರೆ. ಇವರು ಆತಿಥೇಯ ಬೌಲಿಂಗ್ ಪಡೆಗೆ ಸವಾಲಾಗುವುದು ಖಚಿತ.

ತಂಡಗಳು
ಭಾರತ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜೈದೇವ್ ಉನದ್ಕತ್.

ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಷೇನ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರಾನ್ ಗ್ರೀನ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಆಗರ್, ಮಿಚೆಲ್ ಸ್ಟಾರ್ಕ್, ನೇಥನ್ ಎಲಿಸ್, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT