ಶನಿವಾರ, ಅಕ್ಟೋಬರ್ 24, 2020
27 °C

PV Web Exclusive | ವಿರಾಟ್–ಎಬಿಡಿ ಸ್ನೇಹ ಸಂಬಂಧ.. ಎಲ್ಲಿಯದೋ ಈ ಅನುಬಂಧ...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

’ಮಾಮರವೆಲ್ಲೋ..ಕೋಗಿಲೆಯೆಲ್ಲೋ..ಏನೀ ಸ್ನೇಹ ಸಂಬಂಧ ..ಎಲ್ಲಿಯದೋ ಈ ಅನುಬಂಧ..‘

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಸ್ನೇಹವನ್ನು ನೋಡಿದಾಗಲೆಲ್ಲ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಈ ಗೀತೆ ನೆನಪಾಗುತ್ತದೆ. 

ದೇಶ, ಭಾಷೆ, ವಯಸ್ಸು, ಅನುಭವ, ಸಾಧನೆಗಳಲ್ಲಿ ಇಬ್ಬರಿಗೂ ವ್ಯತ್ಯಾಸಗಳಿವೆ. ಆದರೂ ಇವರ ಹಾಲು–ಜೇನು ಸಂಬಂಧದ ಸವಿ ಕ್ರಿಕೆಟ್‌ಪ್ರಿಯರಿಗೆ ಅಪ್ಯಾಯಮಾನವಾಗುತ್ತಿದೆ. 2004ರಲ್ಲಿಯೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಎಬಿಡಿ, ವಿರಾಟ್ ಭಾರತ ತಂಡಕ್ಕೆ ಕಾಲಿಡುವ ಮುನ್ನವೇ ದಿಗ್ಗಜರ ಸಾಲಿನಲ್ಲಿ ಗುರುತಿಸಿಕೊಂಡಿದ್ದವರು. ತಮ್ಮ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ವಿಕೆಟ್‌ಕೀಪಿಂಗ್, ಅದ್ಭುತವಾದ ಫೀಲ್ಡಿಂಗ್‌ಗಳಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಮುಂದೆ ನಾಯಕನಾಗಿಯೂ ಆಡಿದರು. 

2008ರಲ್ಲಿ ಐಪಿಎಲ್ ಆರಂಭವಾದಾಗ ಕೊಹ್ಲಿ ಆರ್‌ಸಿಬಿಯಲ್ಲಿ ಸ್ಥಾನ ಪಡೆದಿದ್ದರು. 2011ರಲ್ಲಿ ಅರ್‌ಸಿಬಿಗೆ ಬರುವ ಮುನ್ನ ಎಬಿಡಿ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿದ್ದರು. ಎಬಿಡಿಯೇ ಹೇಳುವಂತೆ  ಮೊದಲು ವಿರಾಟ್ ಜೊತೆಗೆ ಹೆಚ್ಚು ನಂಟಿರಲಿಲ್ಲ. ಆದರೆ ಅವರ ಬಗ್ಗೆ ಒಂದಿಷ್ಟು ವಿಷಯ ಕೇಳಿದ್ದರಂತೆ. 

ಆರ್‌ಸಿಬಿಗೆ ಎಬಿಡಿ ಬಂದ ನಂತರ ಕ್ರಿಕೆಟ್  ಆಟವು ಇವರನ್ನು ಸಮೀಪಕ್ಕೆ ತಂದರೆ, ಉದ್ಯಾನನಗರಿ ಬೆಂಗಳೂರು ಇವರ ಸ್ಹೇಹಕ್ಕೆ ನೀರೆರೆದು ಹಸಿರಾಗಿಸಿತು. ಅದರ ಫಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ವರ್ಚಸ್ಸು ಹೆಚ್ಚಾಗಲು ಕಾರಣವಾಯಿತು. ಸೋಮವಾರ ರಾತ್ರಿಯ ಪಂದ್ಯದಲ್ಲಿ ಈ ಜೋಡಿಯ ಆಟವೇ ಆರ್‌ಸಿಬಿ ಜಯಕ್ಕೂ ಕಾರಣವಾಯಿತು.

’ಮಿಸ್ಟರ್ 360 ಡಿಗ್ರಿ‘ ಎಂದೇ ಖ್ಯಾತರಾಗಿರುವ ಎಬಿಡಿ ಮತ್ತು ’ಕಿಂಗ್ ಕೊಹ್ಲಿ‘ ವಿರಾಟ್ ಇಲ್ಲೊಂದು ಇತಿಹಾಸ ಬರೆದರು. ಇಲ್ಲಿ ಅವರು ಆಡಿದ 100 ರನ್‌ಗಳ ಜೊತೆಯಾಟವು  ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯ ವಿನೂತನ ದಾಖಲೆಯೂ ಆಯಿತು. ಅವರಿಬ್ಬರಿಂದ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಮೂಡಿಬಂದಿದ್ದು ಇದು ಹತ್ತನೇ ಬಾರಿ. ಇಂತಹ ದಾಖಲೆ ಇದೇ ಮೊದಲು. ಬ್ಯಾಟಿಂಗ್, ದಾಖಲೆ, ಆಟದ ವಿಷಯ ಒಂದೆಡೆ. ಆದರೆ ಅವರಿಬ್ಬರ ಸ್ನೇಹ ಮಾತ್ರ ಇದೆಲ್ಲವನ್ನೂ ಮೀರಿದ ದೃಷ್ಟಾಂತ.

’ವಿರಾಟ್ ಬಗ್ಗೆ ನನ್ನ ಗೆಳೆಯ ಮಾರ್ಕ್ ಬೌಷರ್ (ವಿಕೆಟ್ ಕೀಪರ್) ಯಾವಾಗಲೂ ಹೇಳುತ್ತಿದ್ದರು. ಆರ್‌ಸಿಬಿಯಲ್ಲಿದ್ದ ಬೌಷರ್ 19–20 ವರ್ಷದ ವಿರಾಟ್ ಆಟದ ಶೈಲಿ, ನಡವಳಿಕೆಗಳ ಕುರಿತು ಆಗಾಗ ಮಾತನಾಡುತ್ತಿದ್ದರು. 2010ರ ಸಂದರ್ಭದಲ್ಲಿ ಜೋಹಾನ್ಸ್‌ಬರ್ಗ್‌ನ ಆ ಟನೆಲ್‌ನಲ್ಲಿ ಮೊದಲ ಬಾರಿ ಕೊಹ್ಲಿಯನ್ನು ನೋಡಿದ್ದೆ. ಈ ಹುಡುಗನನ್ನು ನಂಬುವುದು ಹೇಗೆಂದು ಯೋಚಿಸಿದ್ದೆ. ಆದರೆ ನಂತರದ ದಿನಗಳಲ್ಲಿ ಅವರನ್ನು ನಂಬಿದವರಲ್ಲಿ ನನ್ನ ಹಲವು ಸ್ನೇಹಿತರಿದ್ದರು. ಅದರಿಂದಾಗಿ ಗೆಳೆತನ ಬೆಳೆಯಿತು‘ ಎಂದು ಕೆಲವು ದಿನಗಳ ಹಿಂದೆ  ಕೊಹ್ಲಿಯೊಂದಿಗೆ  ಇನ್ಸ್ಟಾಗ್ರಾಮ್‌ನಲ್ಲಿ ನಡೆಸಿದ್ದ ಸಂವಾದದಲ್ಲಿ ಎಬಿಡಿ ಹೇಳಿದ್ದರು.

ಅದೇ ಕಾರ್ಯಕ್ರಮದಲ್ಲಿ ವಿರಾಟ್ ಕೂಡ ಆ ದಿನವನ್ನು ನೆನಪಿಸಿಕೊಂಡಿದ್ದರು. 

’ಅವತ್ತು ಜೋಹಾನ್ಸ್‌ಬರ್ಗ್‌ನಲ್ಲಿ ನಾವು (ಭಾರತ ತಂಡ) ಅಭ್ಯಾಸಕ್ಕೆ ಬಂದಿದ್ದೆವು. ಎಬಿಡಿ ಬಳಗವು ಅಭ್ಯಾಸ ಮುಗಿಸುವ ಹಂತದಲ್ಲಿತ್ತು. ಆಗ ನಾನು ನಾವು  ಕೂಡಿ ಆಡಲಿದ್ದೇವೆ ಎಂದಿದ್ದೆ. ಅವತ್ತಿನದ್ದು ಅವರೊಂದಿಗೆ ಚುಟುಕು ಸಂವಾದವಷ್ಟೇ. ಆದು ಕಾಕತಾಳೀಯವೋ ಏನೋ ಎಂಬಂತೆ ಒಂಬತ್ತು ವರ್ಷಗಳಲ್ಲಿ ನಿಕಟ ಸ್ನೇಹಿತರಾಗಿದ್ದೇವೆ‘ ಎಂದಿದ್ದರು ವಿರಾಟ್.

ಕೊಹ್ಲಿ ಅವರು ಇವತ್ತು ಅಗ್ರಶ್ರೇಣಿಯ ಬ್ಯಾಟ್ಸ್‌ಮನ್, ಭಾರತ ಮತ್ತು ಆರ್‌ಸಿಬಿ ತಂಡದ ನಾಯಕನಾಗಿ ಗಳಿಸುತ್ತಿರುವ ಯಶಸ್ಸಿನಲ್ಲಿ ಮಹೇಂದ್ರಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರ ಮಾರ್ಗದರ್ಶನದ ಪಾಲು ಬಹಳಷ್ಟಿದೆ. ಅಷ್ಟೇ  ಮಾರ್ಗದರ್ಶನ ಎಬಿಡಿಯಿಂದಲೂ ವಿರಾಟ್‌ಗೆ ಲಭಿಸಿರುವುದು ಸುಳ್ಳಲ್ಲ. ಒಡನಾಟದಲ್ಲಿ ಕಲಿಯುತ್ತ, ನಲಿಯುತ್ತ ಬೆಳೆಯುವ ಪರಿ ಇದು.

ಅಗ್ರೆಸಿವ್ ಕ್ಯಾಪ್ಟನ್, ಪ್ರಚಾರಪ್ರಿಯ ಎಂದೆಲ್ಲ ಕರೆಸಿಕೊಳ್ಳುವ ವಿರಾಟ್ ಗೆಳೆತನದ ಬಗ್ಗೆ ಎಬಿಡಿ ಮಾತ್ರವಲ್ಲ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಪಾಕಿಸ್ತಾನದ ಶಾಹೀದ್ ಆಫ್ರಿದಿ, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಬಾಂಗ್ಲಾದ ಶಕೀಬ್ ಅಲ್ ಹಸನ್ ಕೂಡ ಎದೆ ತುಂಬಿ ಹೇಳುತ್ತಾರೆ. ಧೋನಿ ಮತ್ತು ಸೆಹ್ವಾಗ್ ಪಾಲಿಗಂತೂ ವಿರಾಟ್ ಎಂದರೆ ’ಚೀಕೂ‘ ಎಂಬ ಆಪ್ತಸ್ನೇಹಿತ. ತನ್ನ ಆಟದಲ್ಲಿಯೂ, ಆಸ್ತಿ ಗಳಿಕೆಯಲ್ಲಿಯೂ, ಅಭಿಮಾನಿಗಳ ಗಳಿಕೆಯಲ್ಲಿಯೂ ವಿರಾಟ್  ಮುಂದಿದ್ದಾರೆ. ಆದರೆ, ಆಟದ ಹಾದಿಯಲ್ಲಿ ಸ್ನೇಹಿತರನ್ನು ಗಳಿಸುತ್ತಲೇ ಸಾಗಿದ್ದಾರೆ. ಅದೇ ಹಾದಿಯಲ್ಲಿ ಸಿಕ್ಕಿರುವ ಬಾಳಗೆಳತಿ ಅನುಷ್ಕಾ ಶರ್ಮಾ ಕೂಡ ವಿರಾಟ್ ವ್ಯಕ್ತಿತ್ವ ರೂಪಿಸುವಲ್ಲಿ ಕಾಣಿಕೆ ನೀಡುತ್ತಿದ್ದಾರೆ.

’ಕ್ರಿಕೆಟ್‌ ಆಟ ಹೌದು. ಆದರೆ ಅದೆಲ್ಲವನ್ನೂ ಮೀರಿದ್ದು ಹೃದಯಗಳನ್ನು ಬೆಸೆಯುವ ಗೆಳೆತನದ ಗಟ್ಟಿ ಸೇತುವೆ ಅದು‘ ಎಂದು ವಿರಾಟ್ ಹೇಳುತ್ತಾರೆ.

ಅವರ ಮತ್ತು ಎಬಿಡಿಯ ಸ್ನೇಹ, ಸಂಬಂಧ ಕಳೆದ ಕೆಲವು ವರ್ಷಗಳಿಂದ ಆರ್‌ಸಿಬಿಗೆ ವರದಾನವೇ ಆಗಿದೆ. ಆದ್ದರಿಂದಲೇ ಬೆಂಗಳೂರಿನ ಕ್ರಿಕೆಟ್‌ಪ್ರೇಮಿಗಳು ಈ ಇಬ್ಬರೂ ಆಟಗಾರರಿಗೆ ಸಮತೂಕದ ಪ್ರೀತಿಯನ್ನೇ ಧಾರೆಯೆರೆಯುತ್ತಿದ್ದಾರೆನ್ನುವುದು ಸುಳ್ಳಲ್ಲ. ಅಷ್ಟೇ ಅಲ್ಲ; ಕೆಲವು ವರ್ಷ ಈ ತಂಡದಲ್ಲಿ ಆಡಿದ್ದ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಬಗ್ಗೆಯೂ ’ಸಿಲಿಕಾನ್ ಸಿಟಿ‘ಯ ಜನರಿಗೆ ಮಮತೆ ಇದೆ.  ಅದಕ್ಕೆ ಅಲ್ಲವೇ,  ಪ್ರತಿ ಬಾರಿ ಆರ್‌ಸಿಬಿಯು ಕಪ್ ಗೆಲ್ಲುವ ಭರವಸೆ ಮೂಡುವುದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು