ಬುಧವಾರ, ಆಗಸ್ಟ್ 10, 2022
21 °C

ಶಾರ್ಜಾ ಅಂಗಣದ ಮೋಹಕತೆಗೆ ಮನಸೋತ ಗಂಗೂಲಿ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಮೂರು ಕ್ರೀಡಾಂಗಣಗಳಲ್ಲಿ ಒಂದಾದ ಶಾರ್ಜಾ ಅಂಗಣಕ್ಕೆ ಭೇಟಿ ನೀಡಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಡಾಂಗಣದ ಹೊಸ ರೂಪಕ್ಕೆ ಮನಸೋತರು. 

ಐಪಿಎಲ್ ಸಿದ್ಧತೆಗಳ ಪರಿಶೀಲನೆಗೆ ಯುಎಇಗೆ ಬಂದಿರುವ ಗಂಗೂಲಿ ಭಾನುವಾರ ಶಾರ್ಜಾಗೆ ಬಂದರು. ಅವರ ಭೇಟಿಗೆ ಸಂಬಂಧಿಸಿ ಸೋಮವಾರ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ’ಇಲ್ಲಿ ಕಣಕ್ಕೆ ಇಳಿಯಲು ಯುವ ಆಟಗಾರರು ಕಾತರದಿಂದ ಕಾಯುತ್ತಿದ್ದಾರೆ‘ ಎಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದೆ.

’ಕ್ರೀಡಾಂಗಣ ಮೋಹಕ ವಾತಾವರಣವನ್ನು ಹೊಂದಿದೆ. ಇಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಇತಿಹಾಸ ಬರೆದಿದ್ದಾರೆ’ ಎಂದೂ ಅವರು ಹೇಳಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಶಾರ್ಜಾ ಅಂಗಣವನ್ನು ಈಚೆಗೆ ನವೀಕರಿಸಿ ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ರಾಯಲ್ ಸ್ಯೂಟ್, ವೀಕ್ಷಕ ವಿವರಣೆ ಕೇಂದ್ರ, ವಿಐಪಿ ಬಾಕ್ಸ್‌ಗಳನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ಕೋವಿಡ್‌–19 ಹಿನ್ನೆಲೆಯಲ್ಲಿ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡುವುದಕ್ಕೆ ಬೇಕಾದ ಸೌಕರ್ಯಗಳನ್ನೂ ಕಲ್ಪಿಸಲಾಗಿತ್ತು.

ಗಂಗೂಲಿ ಭೇಟಿಯ ಸಂದರ್ಭದಲ್ಲಿ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಮಾಹಿ ಮುಖ್ಯಸ್ಥ ರಾಜೀವ್ ಶುಕ್ಲಾ, ಐಪಿಎಲ್ ಸಿಒಒ ಹೇಮಾಂಗ್ ಅಮೀನ್‌, ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್‌ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಮುಬಾಶಿರ್ ಉಸ್ಮಾನಿ ಇದ್ದರು.

ಇದೇ 19ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಪಂದ್ಯಗಳು ದುಬೈ, ಅಬುಧಾಭಿ ಮತ್ತು ಶಾರ್ಜಾದಲ್ಲಿ ನಡೆಯಲಿದ್ದು ಶಾರ್ಜಾ 12 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು