ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಪಡೆಗೆ ಚಿಗುರಿದ ಜಯದ ನಿರೀಕ್ಷೆ

ರಣಜಿ ಕ್ರಿಕೆಟ್; ಕೌಶಿಕ್, ರೋಹಿತ್ ಮೋಡಿ; ಸೋಲು ತಪ್ಪಿಸಿಕೊಳ್ಳಲು ಗುಜರಾತ್ ಪ್ರಯತ್ನ
Published 14 ಜನವರಿ 2024, 16:06 IST
Last Updated 14 ಜನವರಿ 2024, 16:06 IST
ಅಕ್ಷರ ಗಾತ್ರ

ಅಹಮದಾಬಾದ್: ಮಧ್ಯಮವೇಗಿ ವಾಸುಕಿ ಕೌಶಿಕ್ ಮತ್ತು ನವಪ್ರತಿಭೆ ರೋಹಿತ್ ಕುಮಾರ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿಯೂ ಜಯಿಸುವ ನಿರೀಕ್ಷೆ ಗರಿಗೆದರಿದೆ. ಆತಿಥೇಯ ಗುಜರಾತ್ ತಂಡವು ಸೋಲು ತಪ್ಪಿಸಿಕೊಳ್ಳಲು ಡ್ರಾ ಸಾಧಿಸುವತ್ತ ಚಿತ್ತ ನೆಟ್ಟಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಭಾನುವಾರ ಮೂರನೇ ದಿನದಾಟ ಮುಕ್ತಾಯವಾದಾಗ ಗುಜರಾತ್ ಎರಡನೇ ಇನಿಂಗ್ಸ್‌ನಲ್ಲಿ 68 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 171 ರನ್‌ ಗಳಿಸಿತು. 61 ರನ್‌ಗಳ ಮುನ್ನಡೆಯನ್ನೂ ಸಾಧಿಸಿದೆ.  ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 110 ರನ್‌ಗಳ ಮುನ್ನಡೆಯ ಮೊತ್ತವನ್ನು ಆತಿಥೇಯರು ಚುಕ್ತಾ ಮಾಡಿದರು. ಆದರೆ, ದೀರ್ಘ ಇನಿಂಗ್ಸ್ ಆಡಿ ದೊಡ್ಡ ಗುರಿಯೊಡ್ಡುವ ಅವರ ಕನಸಿಗೆ ಕರ್ನಾಟಕದ ಮಧ್ಯಮವೇಗಿ ಕೌಶಿಕ್ (11ಕ್ಕೆ3) ಮತ್ತು ಸ್ಪಿನ್ನರ್ ರೋಹಿತ್ (42ಕ್ಕೆ2) ಅಡ್ಡಿಯಾದರು.

ಪಂದ್ಯದ ಮೊದಲ ದಿನವೇ ಗಾಯಗೊಂಡು ಹೊರಗುಳಿದ ವೇಗಿ ಪ್ರಸಿದ್ಧ ಕೃಷ್ಣ ಅವರ ಗೈರುಹಾಜರಿಯಲ್ಲಿಯೂ ಕರ್ನಾಟಕ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಪಂದ್ಯದ ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಬೇಗನೆ ಮೂರು ವಿಕೆಟ್‌ಗಳನ್ನು ಕಬಳಿಸಿ, ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿ ಜಯಿಸುವ ವಿಶ್ವಾಸ  ಮಯಂಕ್ ಅಗರವಾಲ್ ಪಡೆಯಲ್ಲಿ ಗರಿಗೆದರಿದೆ.

ಕೌಶಿಕ್ ಅವರು ಆರಂಭಿಕ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೆಟ್ ಪಟೇಲ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇನ್ನೊಂದೆಡೆ ಸ್ಪಿನ್ನರ್ ಶುಭಾಂಗ್ ಮತ್ತು ವೇಗಿ ವೈಶಾಖ ವಿಜಯಕುಮಾರ್ ಕೂಡ ಮೇಲಿನ ಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಗಳಿಸಿದರು.  ಇದರಿಂದಾಗಿ ತಂಡವು ಕೇವಲ 52 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.

ಈ ನಡುವೆಯೂ ಚೆಂದದ ಅರ್ಧಶತಕ ಗಳಿಸಿದ ಮನನ್ ಹಿಂಗರೇಜಾ (56; 135ಎ, 4X) ಮತ್ತು ಕ್ಷಿತಿಜ್ ಪಟೇಲ್ (26; 58ಎ) ಅವರು ಗುಜರಾತ್ ತಂಡವನ್ನು ಇನಿಂಗ್ಸ್‌ ಸೋಲಿನ ಆತಂಕದಿಂದ ಪಾರು ಮಾಡಿದರು. ಇವರಿಬ್ಬರೂ ಐದನೇ ವಿಕೆಟ್‌ಗೆ 57 ರನ್‌ ಸೇರಿಸಿದರು.  ಇನಿಂಗ್ಸ್‌ನ 46ನೇ ಓವರ್‌ನಲ್ಲಿ ಕ್ಷಿತಿಜ್ ವಿಕೆಟ್ ಗಳಿಸಿದ ಕೌಶಿಕ್ ಜೊತೆಯಾಟವನ್ನು ಮುರಿದರು.

ಇನಿಂಗ್ಸ್‌ನ 59ನೇ ಓವರ್ ಬೌಲಿಂಗ್‌ ಮಾಡಿದ ರೋಹಿತ್ ಅವರು ಮನನ್ ಮತ್ತು ರಿಪಲ್ ಪಟೇಲ್ ವಿಕೆಟ್‌ಗಳನ್ನು ಗಳಿಸಿದರು. ಆದರೆ ಹ್ಯಾಟ್ರಿಕ್ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. 

ಪಾಂಡೆ–ಸುಜಯ್ ಜೊತೆಯಾಟ: ಎರಡನೇ ದಿನವಾದ ಶನಿವಾರ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ  5 ವಿಕೆಟ್‌ಗಳಿಗೆ 328 ರನ್‌ ಗಳಿಸಿತ್ತು. ಅನುಭವಿ ಬ್ಯಾಟರ್ ಮನೀಷ್ ಪಾಂಡೆ  ಮತ್ತು ಪದಾರ್ಪಣೆಯ ಪಂದ್ಯ ಆಡುತ್ತಿರುವ ಸುಜಯ್ ಸತೇರಿ ಕ್ರೀಸ್‌ನಲ್ಲಿದ್ದರು.  ಭಾನುವಾರ ಆಟ ಮುಂದುವರಿಸಿದ ಇಬ್ಬರೂ  ತಂಡದ ಮೊತ್ತವನ್ನು ಹೆಚ್ಚಿಸುವತ್ತ ಚಿತ್ತ ನೆಟ್ಟಿದರು.

ಸುಜಯ್ (31; 48ಎ) ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದು ಗಮನ ಸೆಳೆದರು. ಗುಜರಾತ್ ತಂಡದ ಅರ್ಜನ್ ನಾಗವಸ್ವಾಲ್ಲಾ ಬೌಲಿಂಗ್‌ನಲ್ಲಿ ಸುಜಯ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಮನೀಷ್ ಮತ್ತು ಸುಜಯ್ 6ನೇ ವಿಕೆಟ್ ಜೊತೆಯಾಟದಲ್ಲಿ 49 ರನ್‌ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT