ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ| ಅನಿವಾರ್ಯವಾಗಿ ಎಡಗೈ ಬ್ಯಾಟ್ ಮಾಡಿದ ಬಲಗೈ ಬ್ಯಾಟರ್ ಹನುಮ ವಿಹಾರಿ

Last Updated 2 ಫೆಬ್ರುವರಿ 2023, 7:02 IST
ಅಕ್ಷರ ಗಾತ್ರ

ಇಂದೋರ್‌: ಇಂದೋರ್‌ನಲ್ಲಿ ಮಧ್ಯಪ್ರದೇಶ ಮತ್ತು ಆಂಧ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿಯ ಕ್ವಾರ್ಟರ್-ಫೈನಲ್ ಪಂದ್ಯದ ಎರಡನೇ ದಿನದಾಟದ ವೇಳೆ ಆಂಧ್ರದ ಬ್ಯಾಟರ್‌ ಹನುಮ ವಿಹಾರಿ ಗಾಯದ ನಡುವೆಯೂ ತಂಡದ ನೆರವಿಗೆ ಧಾವಿಸಿ ಗಮನ ಸೆಳೆದಿದ್ದಾರೆ. ಬಲಗೈ ಬ್ಯಾಟರ್‌ ಆಗಿರುವ ವಿಹಾರಿ, ಅನಿವಾರ್ಯವಾಗಿ ಎಡಗೈ ಬ್ಯಾಟ್‌ ಮಾಡಿರುವ ಅವರ ನಡೆ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದಿದೆ.

ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲೂ ವಿಹಾರಿ ಅವರು ಮಂಡಿ ರಜ್ಜು ಗಾಯದ ನಡುವೆಯೂ ಭಾರತ ತಂಡಕ್ಕೆ ನೆರವಾಗಿದ್ದರು. ಆರ್ ಅಶ್ವಿನ್ ಅವರೊಂದಿಗೆ ಕೂಡಿ ಬ್ಯಾಟ್‌ ಮಾಡಿದ್ದ ಅವರು ತಂಡವನ್ನು ಸೋಲಿನಿಂದ ಪಾರು ಮಾಡಲು ಸೆಣಸಾಟ ನಡೆಸಿದ್ದರು. ಸದ್ಯ ರಣಜಿ ಪಂದ್ಯದಲ್ಲಿ ಅವೇಶ್ ಖಾನ್ ಅವರ ಬೌನ್ಸರ್‌ ಎದುರಿಸುವ ವೇಳೆ ಎಡ ಮುಂಗೈ ಮುರಿತಕ್ಕೆ ಒಳಗಾಗಿ ಅವರು ಅಂಗಣದಿಂದ ನಿರ್ಮಿಸಿದ್ದರು. ಆದರೆ, ತಂಡ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಮತ್ತೆ ಬ್ಯಾಟ್‌ ಮಾಡಲು ಅಂಗಣಕ್ಕೆ ಬಂದು ಅಚ್ಚರಿ ಮೂಡಿಸಿದ್ದರು. ಗಾಯದ ಕಾರಣದಿಂದ ಬಲಗೈ ಬ್ಯಾಟಿಂಗ್‌ ಮಾಡಲಾಗದೇ ಎಡಗೈ ಬ್ಯಾಟಿಂಗ್‌ ಮಾಡಿ ಪ್ರತಿರೋಧ ತೋರಿದರು. ವಿಹಾರಿ ಅವರ ಕಚ್ಚೆದೆಯ ಆಟ ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

37 ಎಸೆತಗಳಲ್ಲಿ 16 ರನ್ ಗಳಿಸಿ ಆಡುತ್ತಿದ್ದಾಗ ವಿಹಾರಿ ಅವರಿಗೆ ಗಾಯವಾಗಿತ್ತು. ಸ್ಕ್ಯಾನ್ ಮಾಡಲೆಂದು ಅವರನ್ನು ಕರೆದೊಯ್ಯಲಾಗಿತ್ತು. ಅವರ ಮುಂಗೈ ಮುರಿತವಾಗಿರುವುದು ಎಕ್ಸ್-ರೇಯಿಂದ ಗೊತ್ತಾಗಿತ್ತು. ವಿಹಾರಿ ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಮೊದಲ ದಿನ ಮತ್ತು ಎರಡನೇ ದಿನದ ಆರಂಭದಲ್ಲಿ ಆಂಧ್ರ ಪ್ರದೇಶ ಸುಸ್ಥಿತಿಯಲ್ಲೇ ಇತ್ತು. ರಿಕಿ ಭುಯಿ (149) ಮತ್ತು ಕರಣ್ ಶಿಂಧೆ (110) ಅವರ ಆಟದಿಂದಾಗಿ ವಿಹಾರಿಗೆ ಆಡಲು ಅವಕಾಶವೇ ಸಿಕ್ಕಿರಲಿಲ್ಲ. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದ ಆಂಧ್ರ ನಾಟಕೀಯ ತಿರುವ ಕಂಡಿತ್ತು. ಭುಯಿ ಮತ್ತು ಶಿಂಧೆ ನಿರ್ಗಮನದ ನಂತರ ದಿಢೀರ್‌ ಪತನಗೊಂಡ ಆಂಧ್ರ 353ಕ್ಕೆ 9 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಗಾಯಗೊಂಡು ಅಂಗಣದಿಂದ ನಿರ್ಗಮಿಸಿದ್ದ ವಿಹಾರಿ ಈ ಹಂತದಲ್ಲಿ ಬ್ಯಾಟ್‌ ಮಾಡಲು ಮತ್ತೆ ಅಂಗಣಕ್ಕೆ ಬಂದರು. ಬಲಗೈ ಬ್ಯಾಟರ್‌ ಎಡಗೈಲಿ ಬ್ಯಾಟ್‌ ಮಾಡುತ್ತಾ ಪ್ರತಿರೋಧವೊಡ್ಡುತ್ತಾ ನಿಂತರು.

ಭೋಜನ ವಿರಾಮದ ಹೊತ್ತಿಗೆ ವಿಹಾರಿ ಅವರು 9ನೇ ಆಟಗಾರ ಲಲಿತ್ ಮೋಹನ್ ಅವರೊಂದಿಗೆ ಕೂಡಿ ಹತ್ತು ಓವರ್‌ಗಳಲ್ಲಿ 26 ರನ್ ಗಳಿಸಿದರು. ಆಂಧ್ರ 9 ವಿಕೆಟ್‌ಗೆ 379 ರನ್ ಗಳಿಸಿತ್ತು. ಊಟದ ವಿರಾಮದ ನಂತರದ ಮೊದಲ ಎಸೆತದಲ್ಲಿ ಸರನ್ಶ್ ಜೈನ್ ಎಸೆದ ಬಾಲ್‌ಗೆ ವಿಹಾರಿ ಎಲ್ಬಿಡಬ್ಲ್ಯು ಆದರು. 27 ರನ್‌ ಗಳಿಸಿದ್ದ ಅವರು ಔಟಾದರು.

ವಿಹಾರಿ ಅವರು ಈ ಋತುವಿನಲ್ಲಿ 13 ಇನ್ನಿಂಗ್ಸ್‌ಗಳಲ್ಲಿ 39.58 ಸರಾಸರಿಯಲ್ಲಿ ಎರಡು ಅರ್ಧ ಶತಕಗಳೊಂದಿಗೆ 475 ರನ್ ಗಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT