ಗುರುವಾರ , ಏಪ್ರಿಲ್ 22, 2021
30 °C
ನೂರನೇ ಪಂದ್ಯ ಆಡಲಿದ್ದಾರೆ ಭಾರತೀಯ ಮಹಿಳಾ ತಂಡದ ಆಟಗಾರ್ತಿ

PV Web Exclusive| ಹರ್ಮನ್‌ಪ್ರೀತ್ ಆಟದ ಸೊಬಗಿಗೆ ‘ಶತಕ’ದ ರಂಗು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಎಡಗೈ ಸ್ಪಿನ್ನರ್‌ ಹಾಕಿದ ಎಸೆತ‌, ಪಿಚ್‌ ಆಗುವ ಮೊದಲೇ ಮುನ್ನುಗ್ಗಿ ಮಿಡ್‌ಆಫ್‌ಗೆ ಮೋಹಕ ಹೊಡೆತ…. ಚೆಂಡು ಬೌಂಡರಿ ಗೆರೆ ದಾಟಿದ್ದೇ ಗೊತ್ತಾಗಲಿಲ್ಲ. ಅದೇ ರೀತಿಯ ಮತ್ತೊಂದು ಎಸೆತಕ್ಕೂ ಭರ್ಜರಿ ಹೊಡೆತ; ಮೇಲೆ ಚಿಮ್ಮಿದ ಚೆಂಡು ಹೋಗಿ ಬಿದ್ದದ್ದು ಬೌಂಡರಿ ಗೆರೆಯ ಆಚೆ. ಲೆಗ್ ಬ್ರೇಕ್ ಗೂಗ್ಲಿಗೂ ಅದೇ ಮಾದರಿಯ ಸ್ವಾಗತ; ನಾಲ್ಕು ಹೆಜ್ಜೆ ಮುಂದಿಕ್ಕಿ ಮಿಡ್‌ಆನ್‌ಗೆ ಸ್ಮ್ಯಾಷ್‌… ಮುಗಿಲೆತ್ತರಕ್ಕೆ ಚಿಮ್ಮಿದ ಚೆಂಡು ಬಿದ್ದದ್ದು ಪ್ರೇಕ್ಷಕರ ಸ್ಟ್ಯಾಂಡ್ ಮೇಲೆ. ಒಂದು ಎಸೆತಕ್ಕೆ ಮೊಣಕಾಲೂರಿ ದಂಡನೆ, ಮತ್ತೊಂದಕ್ಕೆ ಕಟ್‌ಶಾಟ್. ಲೆಗ್ ಸ್ಟಂಪ್‌ಮೇಲೆ ನುಗ್ಗಿ ಬಂದ ವೇಗಿಗಳ ಎಸೆತಕ್ಕೆ ಫ್ಲಿಕ್‌ ‘ಶಾಕ್‌’…

2017ರ ಮಹಿಳೆಯರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮೆಘಾನ್ ಶೂಟ್, ಎಲಿಸ್ ಪೆರಿ, ಎಲಿಸ್ ವಿಲಾನಿ, ಸ್ಪಿನ್ನರ್‌ಗಳಾದ ಜೆಸ್ ಜೊನಾಸೆನ್‌, ಆ್ಯಶ್ಲಿ ಗಾರ್ಡನರ್‌ ಮತ್ತು ಕ್ರಿಸ್ಟೆನ್ ಬೀಮ್ಸ್ ಅವರ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ, ಬೌಂಡರಿಗೆ ಅಟ್ಟಿದ ಬಗೆ ಇದು. ಈ ರೀತಿಯ ಸ್ಫೋಟಕ, ಮೋಹಕ ಬ್ಯಾಟಿಂಗ್ ಮಾಡಿ ಭಾರತದ ನಾಲ್ಕನೇ ಕ್ರಮಾಂಕದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಅಂದು ಗಳಿಸಿದ್ದು ಅಜೇಯ 171 ರನ್‌. 115 ಎಸೆತಗಳಲ್ಲಿ ಗುಡ್ಡೆ ಹಾಕಿದ ಈ ಮೊತ್ತಕ್ಕಾಗಿ ಅವರು 20 ಬಾರಿ ಚೆಂಡನ್ನು ಬೌಂಡಯಾಚೆ ದಾಟಿಸಿದ್ದರೆ ಏಳು ಸಲ ಚೆಂಡು ಸ್ಟ್ಯಾಂಡ್‌ಗಳಲ್ಲಿ ಬಿದ್ದಿತ್ತು.

ಮಹಿಳಾ ಕ್ರಿಕೆಟ್‌ನಲ್ಲಿ ಇಂಥ ಬ್ಯಾಟಿಂಗ್ ಕಾಣಸಿಗುವುದು ವಿರಳ. ಈ ಕಾರಣಕ್ಕಾಗಿಯೇ ವಿಶ್ವದ ಮಹಿಳಾ ಕ್ರಿಕೆಟ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ವಿಶಿಷ್ಟವಾಗಿ ಕಾಣುತ್ತಾರೆ. ಭಾರತದ ಮಟ್ಟಿಗೆ ಮಹಿಳಾ ಕ್ರಿಕೆಟ್‌ನ ಬ್ಯಾಟಿಂಗ್‌ಗೆ ಹೊಸ ಭ್ಯಾಷ್ಯ ಬರೆದ ಅವರು ಇದೀಗ ‘ಶತಕ’ದ  ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಒಂದು ಶತಕ ಸಿಡಿಸಿರುವ ಹರ್ಮನ್‌ಪ್ರೀತ್ ಭಾನುವಾರ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದು ವೈಯಕ್ತಿಕ ನೂರನೇ ಪಂದ್ಯ. ಟಿ20ಯಲ್ಲಿ ಈಗಾಗಲೇ 114 ಪಂದ್ಯಗಳನ್ನು ಆಡಿದ್ದು ಎರಡೂ ಮಾದರಿಗಳಲ್ಲಿ ನೂರು ದಾಟಿದ ಸಾಧನೆಯ ಅಪರೂಪದ ಆಟಗಾರ್ತಿಯಾಗಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿರುವವರು 42 ಮಂದಿ ಮಾತ್ರ. ಭಾರತದವರ ಪಟ್ಟಿಯಲ್ಲಿ ಐದನೆಯವರು ಹರ್ಮನ್‌ಪ್ರೀತ್‌ ಕೌರ್. ಮಹಿಳಾ ಕ್ರಿಕೆಟ್‌ನಲ್ಲಿ 200 ಪಂದ್ಯ ಆಡಿರುವವರು ಒಬ್ಬರೇ. ಅವರು, ಭಾರತದ ಮಿಥಾಲಿ ರಾಜ್‌. ಜೂಲನ್ ಗೋಸ್ವಾಮಿ 182, ಅಂಜುಮ್ ಚೋಪ್ರಾ 127, ಅಮಿತಾ ಶರ್ಮಾ 116 ಪಂದ್ಯ ಆಡಿದ್ದಾರೆ.

ಗಂಡುಮಗುವಿನ ಅಂಗಿ ತಂದಿದ್ದ ತಂದೆ

ಹರ್ಮನ್‌ಪ್ರೀತ್ ಕೌರ್ ಅವರ ತಂದೆ ಹರ್ಮಂದರ್ ಸಿಂಗ್ ಭುಲ್ಲರ್ ಹಿಂದೊಮ್ಮೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುತೂಹಲಕಾರಿ ಅಂಶವೊಂದನ್ನು ಉಲ್ಲೇಖಿಸಿದ್ದರು. 1989ರ ಮಾರ್ಚ್‌ 8ರಂದು, ಹರ್ಮನ್‌ಪ್ರೀತ್ ಕೌರ್ ಜನಿಸಿದ ದಿನ ಹರ್ಮಂದರ್, ಗಂಡುಮಗುವಿಗೆ ತೊಡಿಸುವ ಅಂಗಿ ತೆಗೆದುಕೊಂಡು ಬಂದಿದ್ದರಂತೆ. ಆದರೆ ಜನಿಸಿದ ಮಗು ಗಂಡು ಆಗಿರಲಿಲ್ಲ. ಆದರೂ ಏನಾಯಿತು, ಪುರುಷರ ಪಾರಮ್ಯ ಇರುವ ಕ್ರಿಕೆಟ್‌ನಲ್ಲಿ ಮಹಿಳೆಯೂ ಪುರುಷರ ಹಾಗೆಯೇ ಶಕ್ತಿಶಾಲಿ ಹೊಡೆಗಳ ಮೂಲಕ ಮಿಂಚಬಲ್ಲಳು ಎಂಬುದನ್ನು ಮಗಳು ಸಾಬೀತು ಮಾಡಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು ಜನಿಸಿದ ಈ ಪ್ರತಿಭೆ ಮಹಿಳೆಗೂ ಗೌರವ ತಂದಿದ್ದಾರೆ; ಕ್ರಿಕೆಟ್‌ನ ಸೊಬಗನ್ನೂ ಹೆಚ್ಚಿಸಿದ್ದಾರೆ. ಇದೀಗ 32ನೇ ವಯಸ್ಸಿಗೆ ಕಾಲಿಡುವ ಹಿಂದಿನ ದಿನ ಕ್ರಿಕೆಟ್‌ ಜೀವನದ ಮಹತ್ವದ ಮೈಲುಗಲ್ಲನ್ನೂ ದಾಟಿದ್ದಾರೆ, ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ (2009ರ ಮಹಿಳೆಯರ ವಿಶ್ವಕಪ್‌) ಮಾರ್ಚ್ ಏಳರಂದೇ ನೂರನೇ ಪಂದ್ಯ ಆಡಿದ್ದಾರೆ!

ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌ ಆಟಗಾರನಾಗಿರುವ ತಂದೆ ಹ್ಯಾಂಡ್‌ಬಾಲ್ ಕೂಡ ಆಡಿದ್ದು ಕ್ಲಬ್ ಮಟ್ಟದಲ್ಲಿ ಕ್ರಿಕೆಟ್‌ ಕ್ರೀಡೆಯಲ್ಲೂ ಛಾಪು ಮೂಡಿಸಿದ್ದರು. ಮಗಳನ್ನು ಅಥ್ಲೀಟ್ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ಆದದ್ದು ಬೇರೆಯೇ…

ವೀರೇಂದ್ರ ಸೆಹ್ವಾಗ್ ಅವರ ಅಭಿಮಾನಿಯಾಗಿರುವ ಹರ್ಮನ್‌ಪ್ರೀತ್ ಕೌರ್ ಮೂಲತಃ ಆಕ್ರಮಣಕಾರಿ ಆಟಗಾರ್ತಿ. ಆದರೆ ಒಮ್ಮೆ ಅಜಿಂಕ್ಯ ರಹಾನೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದನ್ನು ನೋಡಿ ತಾಳ್ಮೆಯ ಮಹತ್ವವನ್ನು ಅರಿತುಕೊಂಡಿದ್ದರಂತೆ.

ಹರ್ಮನ್‌ಪ್ರೀತ್‌ಗೆ ಪದಾರ್ಪಣೆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಮೂರು ದಿನಗಳ ನಂತರ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಬ್ಯಾಟ್ ಮಾಡಿದರು. ಗಳಿಸಿದ್ದು ಎಂಟೇ ರನ್‌. ನಂತರದ ಐದು ಇನಿಂಗ್ಸ್‌ಗಳಲ್ಲಿ ಸಾಧನೆ ಏನೂ ಇರಲಿಲ್ಲ. ಮುಂದಿನ ವರ್ಷ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಅವರ ನೈಜ ಸಾಮರ್ಥ್ಯ ಹೊರಹೊಮ್ಮಿತು. 113 ಎಸೆತಗಳಲ್ಲಿ ಒಂಬತ್ತು ಬೌಂಡರಿ ಒಳಗೊಂಡ 84 ರನ್‌ ಅವರಲ್ಲಿ ಆತ್ಮವಿಶ್ವಾಸವನ್ನೂ ತಂಡದ ಆಡಳಿತದಲ್ಲಿ ನಿರೀಕ್ಷೆಯನ್ನೂ ಮೂಡಿಸಿತು. 2012ರ ಮಾರ್ಚ್‌ನಲ್ಲಿ ನಡೆದ ಒಟ್ಟು ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 2013 ಅವರಿಗೆ ಚೇತರಿಕೆ ತುಂಬಿದ ವರ್ಷವಾಗಿತ್ತು. ನಂತರ ಹೇಳಿಕೊಳ್ಳುವಂಥ ಸಾಧನೆಯೇನೂ ಆಗಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ ಕಂಡ ಸ್ಫೋಟಕ ಇನಿಂಗ್ಸ್ ಅವರ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಏರಿಸಿತ್ತು.

ಆ ಇನಿಂಗ್ಸ್ ನಂತರ ಹರ್ಮನ್‌ಪ್ರೀತ್ ಕೌರ್ ಭಾರತ ತಂಡದ ಅವಿಭಾಜ್ಯ ಅಂಗವೇ ಆಗಿದ್ದಾರೆ. 2018 ಮತ್ತು 2019ರಲ್ಲಿ ವೈಯಕ್ತಿಕವಾಗಿ ಅನೇಕ ಏಳು–ಬೀಳು ಕಂಡಿದ್ದರೂ ತಂಡದಲ್ಲಿ ಅವರ ಉಪಸ್ಥಿತಿ ಇತರರಿಗೆ ಪ್ರೇರಣೆಯಾಗುತ್ತಿದೆ. ಅಜೇಯ 171 ರನ್ ಗಳಿಸಿದ ನಂತರ ಹರ್ಮನ್‌ಪ್ರೀತ್ ಒಟ್ಟು 17 ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅವುಗಳಲ್ಲಿ ಎರಡು ಅರ್ಧಶತಕಗಳು ಮಾತ್ರ ಮೂಡಿಬಂದಿವೆ. ಮುಂದಿನ ವರ್ಷದ ವಿಶ್ವಕಪ್‌ ದೃಷ್ಟಿಯಲ್ಲಿರಿಸಿಕೊಂಡು ಭಾರತ ತಂಡ ಇದೀಗ ‘ಕೋವಿಡೋತ್ತರ’ ಸರಣಿ ಆಡಲು ಕಣಕ್ಕೆ ಇಳಿದಿದೆ. ತಂಡಕ್ಕೆ ಹರ್ಮನ್‌ಪ್ರೀತ್‌ ಏನು ಕೊಡುಗೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು