ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2007ರ ವಿಶ್ವಕಪ್‌ಗೆ ನಾನೇ ನಾಯಕನಾಗುತ್ತೇನೆ ಎಂದು ಅಂದುಕೊಂಡಿದ್ದೆ: ಯುವಿ

ಅಕ್ಷರ ಗಾತ್ರ

ನವದೆಹಲಿ: 2007ರ ಟ್ವೆಂಟಿ-20 ವಿಶ್ವಕಪ್‌ಗೆ ನಾನೇ ನಾಯಕನಾಗುತ್ತೇನೆ ಎಂದು ಅಂದುಕೊಂಡಿದ್ದೆ. ಆದರೆ ಅನಿರೀಕ್ಷಿತವಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.

'ಸ್ಪೋರ್ಟ್ಸ್ 18' ಸಂದರ್ಶನದಲ್ಲಿ ಈ ಕುರಿತು ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

'2007ರ ಟ್ವೆಂಟಿ-20 ವಿಶ್ವಕಪ್‌ಗೆ ನಾನು ನಾಯಕನಾಗಬೇಕಿತ್ತು. ಬಳಿಕ ಗ್ರೆಗ್ ಚಾಪೆಲ್ ವಿವಾದ ನಡೆದಿತ್ತು. ಸಹಜವಾಗಿಯೇ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಬೆಂಬಲಿಸಿದ್ದೆ. ಬಿಸಿಸಿಐನ ಕೆಲವು ಅಧಿಕಾರಿಗಳು ಅದನ್ನು ಇಷ್ಟಪಡಲಿಲ್ಲ. 'ಯಾರನ್ನಾದರೂ ಕಪ್ತಾರನ್ನಾಗಿ ಮಾಡಬಹುದು, ನನ್ನನ್ನಲ್ಲ' ಎಂಬ ವಿಚಾರ ಬಳಿಕ ನನ್ನ ಗಮನಕ್ಕೆ ಬಂದಿತ್ತು' ಎಂದು ತಿಳಿಸಿದ್ದಾರೆ.

'ಇದು ಎಷ್ಟು ನಿಜ ಎಂಬುದು ನನಗೆ ಗೊತ್ತಿಲ್ಲ. ನಾನೇ ನಾಯಕನಾಗುತ್ತೇನೆ ಎಂದು ಅಂದುಕೊಂಡಿದ್ದೆ. ಆದರೆ ಏಕಾಏಕಿ ನನ್ನನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಲಾಗಿತ್ತು. ವೀರೇಂದ್ರ ಸೆಹ್ವಾಗ್ ತಂಡದಲ್ಲಿರಲಿಲ್ಲ. ಆದ್ದರಿಂದ ಅನಿರೀಕ್ಷಿತವಾಗಿ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್‌ಗೆ ನಾಯಕರಾದರು' ಎಂದು ಹೇಳಿದರು.

'ಸೆಹ್ವಾಗ್ ಹಿರಿಯ ಆಟಗಾರರಾಗಿದ್ದರು. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಇರಲಿಲ್ಲ. ರಾಹುಲ್ ದ್ರಾವಿಡ್ ನಾಯಕರಾಗಿದ್ದಾಗ ನಾನು ಏಕದಿನ ತಂಡದ ಉಪನಾಯಕನಾಗಿದ್ದೆ. ಹಾಗಾಗಿ ನಾನೇ ನಾಯಕನಾಗಬೇಕಿತ್ತು. ನಿಸ್ಸಂಶವಾಗಿಯೂ ಅದು ನನ್ನ ವಿರುದ್ಧದ ನಿರ್ಧಾರವಾಗಿತ್ತು. ಆದರೆ ನನಗೆ ಅದರ ಬಗ್ಗೆ ಯಾವುದೇ ವಿಷಾದವಿಲ್ಲ. ಈಗಲೂ ಅದೇ ರೀತಿ ಸಂಭವಿಸಿದರೆ ನಾನು ನನ್ನ ಸಹ ಆಟಗಾರನನ್ನೇ ಬೆಂಬಲಿಸುತ್ತೇನೆ' ಎಂದು ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ 2007ರ ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ಭಾರತ ಜಯಿಸಿತ್ತು. ಯುವರಾಜ್ ಸಿಂಗ್ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT