ಭಾನುವಾರ, ಡಿಸೆಂಬರ್ 15, 2019
21 °C

ತಂದೆ ಆಸೆಯಂತೆ ಕ್ರಿಕೆಟ್‌ ಶಾಲೆ, ಮಕ್ಕಳಿಗೆ ಧೋನಿ–ವಿರಾಟ್‌ ಪ್ರೇರಣೆಯಾಗಲಿ: ವೀರೂ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಎದುರಾಳಿ ಬೌಲರುಗಳನ್ನು ಹಿಗ್ಗಾಮುಗ್ಗಾ ದಂಡಿಸುತ್ತಿದ್ದ ವಿರೇಂದ್ರ ಸೆಹ್ವಾಗ್, ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿ ಪಡೆದವರು. ಟೆಸ್ಟ್, ಏಕದಿನ, ಟಿ20 ಯಾವುದೇ ಇರಲಿ ‘ಚೆಂಡು ಇರುವುದೇ ದಂಡಿಸಲಿಕ್ಕೆ’ ಎನ್ನುವಂತೆ ಆಡುತ್ತಿದ್ದ ಸೆಹ್ವಾಗ್ ಅಂಗಳದಲ್ಲಿದ್ದಷ್ಟೂ ಹೊತ್ತು ಅಭಿಮಾನಿಗಳಿಗೆ ಮನರಂಜನೆ ಕಟ್ಟಿಟ್ಟಬುತ್ತಿ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಸಾಕಷ್ಟು ಹಿರಿಯ ಕ್ರಿಕೆಟಿಗರು, ಸೆಹ್ವಾಗ್‌ರನ್ನು ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ದೈತ್ಯ ವಿವಿಯನ್ ರಿಚರ್ಡ್ಸನ್ ಅವರಿಗೆ ಹೋಲಿಸಿದ್ದಾರೆ.
ವೇಗಿಯಾಗಲಿ, ಸ್ಪಿನ್ನರ್ ಇರಲಿ ಎದುರಾಳಿಗಳ ಆತ್ಮವಿಶ್ವಾಸ ಕಸಿಯುವಂತೆ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್ ಶೈಲಿಗೆ ಟಿ20 ಕ್ರಿಕೆಟ್ ಭರಾಟೆಯಲ್ಲಿ ಕಳೆದುಹೋಗದವರಿಲ್ಲ. ಹಾಗಾಗಿಯೇ ಸಾಕಷ್ಟು ಕೋಚ್‌ಗಳು ತಮ್ಮ ಶಿಷ್ಯರು ಸೆಹ್ವಾಗ್ ಅವರಂತೆ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಬೇಕು ಎಂದು ಬಯಸುತ್ತಾರೆ. ಸದ್ಯ ಬೀಸಾಟದ ಮೂಲಕ ಗಮನ ಸೆಳೆಯುತ್ತಿರುವ ರೋಹಿತ್ ಶರ್ಮಾ, ರಿಷಭ್ ಪಂತ್, ಮಯಂಕ್ ಅಗರವಾಲ್ ಅವರನ್ನು ಸೆಹ್ವಾಗ್ ಜೊತೆಗೆ ಹೋಲಿಸುವವರಿದ್ದಾರೆ. ಆದರೆ ಸೆಹ್ವಾಗ್‌ಗೆ ಮಾತ್ರ ಅವರ ಮಕ್ಕಳು ಅವರಂತಾಗುವುದು ಬೇಡವಂತೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನನ್ನ ಮಕ್ಕಳು ನನ್ನಂತಾಗುವುದು ಬೇಡ
ಸೆಹ್ವಾಗ್ ಅವರಿಗೆ ಆರ್ಯವೀರ್(12) ಮತ್ತು ವೇದಾಂತ್(9) ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು ‘ಮತ್ತೊಬ್ಬ ಸೆಹ್ವಾಗ್’ ಎಂಬಂತೆ ಬೆಳೆಯುವುದು ಸೆಹ್ವಾಗ್‌ಗೆ ಇಷ್ಟವಿಲ್ಲವಂತೆ. ಬದಲಾಗಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅಥವಾ ಹಾರ್ದಿಕ್ ಪಾಂಡ್ಯರಂತಾಗಲಿ ಎನ್ನಾತ್ತಾರೆ.

‘ನನ್ನ ಮಕ್ಕಳಲ್ಲಿ ಮತ್ತೊಬ್ಬ ಸೆಹ್ವಾಗ್ ಅನ್ನು ಕಾಣುವುದು ನನಗೆ ಇಷ್ಟವಿಲ್ಲ. ಅವರು ಬೇಕಾದರೆ ಧೋನಿಯಂತೆ, ವಿರಾಟ್ ಕೊಹ್ಲಿಯಂತೆ ಅಥವಾ ಹಾರ್ದಿಕ್ ಪಾಂಡ್ಯರಂತಾಗಲಿ. ಹಾಗೆಂದು ಅವರು ಕ್ರಿಕೆಟಿಗರಾಗಬೇಕಿಲ್ಲ. ಒಟ್ಟಿನಲ್ಲಿ ಅವರಿಷ್ಟದಂತಾಗಲು ಮುಕ್ತರು. ಅವರಿಂದ ಎಷ್ಟು ಸಾಧ್ಯವೋ ಅಷ್ಟನ್ನು ಸಾಧಿಸಲು ನಮ್ಮ ಬೆಂಬಲ ಇರಲಿದೆ. ನನ್ನ ಕೋರಿಕೆ ಇಷ್ಟೇ, ಅವರು ಉತ್ತಮ ಮನುಜರಾಗಲಿ’ ಎಂದು ಹೇಳಿದ್ದಾರೆ.

ಸೆಹ್ವಾಗ್ ಭಾರತ ಪರ ಕ್ರಿಕೆಟ್ ಆಡಲು ಸಾಕಷ್ಟು ಬೆವರು ಹರಿಸಿದ್ದರು. ಹಾಗಾಗಿ, ಅವರು ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಶಾಲೆಯೊಂದನ್ನು ಆರಂಭಿಸಬೇಕು ಎಂಬುದು ಸೆಹ್ವಾಗ್ ತಂದೆಯ ಕನಸಾಗಿತ್ತು.
ಇದೀಗ ಸೆಹ್ವಾಗ್, ‘ಸೆಹ್ವಾಗ್ ಅಂತರರಾಷ್ಟ್ರೀಯ ಶಾಲೆ ಮತ್ತು ಕ್ರೀಡಾ ಅಕಾಡೆಮಿ’ ಆರಂಭಿಸಿದ್ದಾರೆ. ಆ ಬಗ್ಗೆ ಮಾತನಾಡಿರುವ ಅವರು, ‘ನಾನು ಈವರೆಗೆ ಸಂಪಾದಿಸಿರುವುದೆಲ್ಲವೂ ಕ್ರಿಕೆಟ್ ಕೊಟ್ಟದ್ದು. ಅದು(ಕ್ರಿಕೆಟ್) ನನಗೆ ನನ್ನ ಪಾಲಿನ ರೊಟ್ಟಿ ಮತ್ತು ಬೆಣ್ಣೆ(ಆಹಾರ) ನೀಡುವುದನ್ನು ಈಗಲೂ ಮುಂದುವರಿಸಿದೆ. ಮತ್ತು ಇದು ಸಮಾಜಕ್ಕೆ ನಾನು ಏನನ್ನಾದರೂ ನೀಡುವ ಸಮಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನೀನು ಯಶಸ್ವಿ ಕ್ರಿಕೆಟಿಗನಾಗಬೇಕಾದರೆ, ಮಕ್ಕಳು ಓದಲು, ಆಡಲು ಹಾಗೂ ಉಳಿಯಲು ಸಾಧ್ಯವಿರುವಂತಹ ಶಾಲೆಯನ್ನು ಪ್ರಾರಂಭಿಸು ಎಂದು ನನ್ನ ತಂದೆ ಸಲಹೆ ನೀಡಿದ್ದರು. ನಾನು ಕ್ರಿಕೆಟ್ ಆಡಲು ಸಾಕಷ್ಟು ಕಷ್ಟಪಟ್ಟಿದ್ದೆ ಎಂಬುದು ಅವರ ಸಂದೇಶದಲ್ಲಿ ಸ್ಪಷ್ಟವಾಗಿತ್ತು. ಈಗ ಅಪ್ಪನನ್ನು ಸಂತಸಪಡಿಸಲು ಹೊರಟಿದ್ದೇನೆ. ನನ್ನ ಶಾಲೆಯಲ್ಲಿ ಕಲಿತ ಕನಿಷ್ಠ ಒಬ್ಬಿಬ್ಬರಾದರೂ ಐಐಟಿಯಲ್ಲಿ ಓದಲಿ. ಖ್ಯಾತ ವೈದ್ಯರಾಗಲಿ ಅಥವಾ ದೇಶಕ್ಕಾಗಿ ಆಡಲಿ. ನಂತರ ನನ್ನ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ಸಂತಸದಿಂದ ವರ್ಗಾಯಿಸುತ್ತೇನೆ’ ಎಂದು ಹೇಳಿದ್ದಾರೆ.

ಭಾರತ ಪರ 104 ಟೆಸ್ಟ್, 251 ಏಕದಿನ ಹಾಗೂ 19 ಟಿ20 ಪಂದ್ಯ ಆಡಿರುವ ಸೆಹ್ವಾಗ್ ಕ್ರಮವಾಗಿ 8,586 ರನ್, 8,273 ರನ್ ಮತ್ತು 394 ರನ್ ಕಲೆಹಾಕಿದ್ದಾರೆ. 104 ಐಪಿಎಲ್ ಪಂದ್ಯಗಳ್ಳೂ ಕಾಣಿಸಿಕೊಂಡಿರುವ ಅವರು 2,728 ರನ್ ಗಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು