ಮಂಗಳವಾರ, ಫೆಬ್ರವರಿ 25, 2020
19 °C

ಯುವ ವಿಶ್ವಕಪ್ ಫೈನಲ್ ಬಳಿಕ ದುರ್ವರ್ತನೆ: ಎರಡೂ ತಂಡಗಳ ಐವರ ವಿರುದ್ಧ ಐಸಿಸಿ ಕ್ರಮ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಪೊಷೆಸ್ಟ್ರೂಮ್: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಗೆಲುವಿನ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ ಬಾಂಗ್ಲಾದೇಶ ತಂಡದ ಮೂವರು ಮತ್ತು ಸೋಲಿನ ನಿರಾಸೆಯಲ್ಲಿದ್ದ ಭಾರತ ತಂಡದ ಇಬ್ಬರು ಆಟಗಾರರು ದುರ್ವರ್ತನೆ ತೋರಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಐಸಿಸಿ ಹೇಳಿದೆ.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾ ಪಡೆ ಭಾರತ ವಿರುದ್ಧ ಮೂರು ವಿಕೆಟ್‌ಗಳ ಜಯ ಸಾಧಿಸಿತ್ತು. ಐತಿಹಾಸಿಕ ಜಯವನ್ನು ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತ ಆಕ್ರಮಣಕಾರಿಯಾಗಿ ಸನ್ನೆ‌ ಮಾಡಿ ಉದ್ಧಟತನ ತೋರಿದ್ದರು. ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡಿದ್ದರು.

ಇದರಿಂದ ಕೆರಳಿದ್ದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು. ಉಭಯ ತಂಡದ ಕೆಲ ಆಟಗಾರರು ಒಬ್ಬರನ್ನೊಬ್ಬರು ತಳ್ಳುತ್ತಾ ಕೈಕೈ ಮಿಲಾಯಿಸುವ ಹಂತಕ್ಕೆ ಸಾಗಿದ್ದರು. ಈ ವೇಳೆ ಅಂಪೈರ್‌ಗಳು ಮತ್ತು ಭಾರತದ ನಾಯಕ ಪ್ರಿಯಂಮ ಗರ್ಗ್‌, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಇದನ್ನೂ ಓದಿ: ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’

ಘಟನೆಯ ವಿಡಿಯೊಗಳನ್ನು ಪರಿಶೀಲಿಸಿರುವ ಐಸಿಸಿ ಎರಡೂ ತಂಡಗಳ ಒಟ್ಟು ಐವರು ಆಟಗಾರರು ದುರ್ನಡತೆ ತೋರಿದ್ದಾರೆ ಎಂದು ಹೇಳಿದೆ. ಮುಂದುವರಿದು ಇಂತಹ ವರ್ತನೆಗಳಿಗೆ ‘ನಮ್ಮ ಕ್ರೀಡೆಯಲ್ಲಿ ಅವಕಾಶವಿಲ್ಲ’ ಎಂದು ಕಟುವಾಗಿ ಹೇಳಿದೆ.

‘ಪಂದ್ಯದ ಬಳಿಕ ಕೆಲವು ಆಟಗಾರರು ತೋರಿದ ಸಂಭ್ರಮ ಮತ್ತು ನಿರಾಸೆಯ ವರ್ತನೆಗಳಿಗೆ ನಮ್ಮ ಕ್ರೀಡೆಯಲ್ಲಿ ಸ್ಥಳಾವಕಾಶವಿಲ್ಲ’ ಎಂದು ಐಸಿಸಿಯ ವ್ಯವಸ್ಥಾಪಕ ನಿರ್ದೇಶಕ ಗಿಯಾಫ್‌ ಅಲ್ಲಾರ್ಡೈಸ್‌ ಹೇಳಿದ್ದಾರೆ.

‘ಹೃದಯದಲ್ಲಿ ಗೌರವವನ್ನು ಹೊಂದಿರುವುದು ಕ್ರಿಕೆಟ್‌ನ ಸ್ಫೂರ್ತಿಯಾಗಿದೆ. ಎದುರಾಳಿ ತಂಡದ ಯಶಸ್ಸನ್ನು ಬೆಂಬಲಿಸುವುದನ್ನು, ತಮ್ಮ ತಂಡದ ಗೆಲುವುನ್ನು ಸಂಭ್ರಮಿಸುವುದನ್ನು ಹಾಗೂ ಸ್ವಯಂ ಶಿಸ್ತನ್ನು ಆಟಗಾರನಿಂದ ನಿರೀಕ್ಷಿಸಲಾಗುತ್ತದೆ’

‘ನಿಕಟ ಪೈಪೋಟಿ ಕಂಡ ಪಂದ್ಯದ ಬಳಿಕ ಆಟಗಾರರ ನೀತಿ ಸಂಹಿತೆಯನ್ನು ಹೇರಬೇಕಿರುವುದು ನಿರಾಶಾದಾಯಕವಾದದ್ದಾಗಿದೆ. ಆದರೂ, ಈ ಯುವ ಆಟಗಾರರ ವರ್ತನೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬದಲಿಸಬೇಕಿರುವುದರಿಂದ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ

ಐಸಿಸಿಯ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಬಾಂಗ್ಲಾದೇಶ ತಂಡದ ತೌಹಿದ್‌ ಹೃದಯ್‌, ಶಮೀಮ್‌ ಹುಸೇನ್‌ ಹಾಗೂ ರಕಿಬುಲ್‌ ಹಸನ್‌ ಅವರಿಗೆ ತಲಾ 6 ಡಿಮೆರಿಟ್‌ ಪಾಯಿಂಟ್ಸ್‌ ಮತ್ತು ಭಾರತದ ಆಕಾಶ್‌ ಸಿಂಗ್‌, ರವಿ ಬಿಷ್ಣೋಯಿ ಅವರಿಗೆ ತಲಾ 5 ಡಿಮೆರಿಟ್‌ ಪಾಯಿಂಟ್ಸ್‌ ಹಾಕಲಾಗಿದೆ.

ಬಿಷ್ಣೋಯಿ ಫೈನಲ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿಕೊಂಡಿದ್ದರು. ಮಾತ್ರವಲ್ಲದೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ (17) ಗಳಿಸಿಕೊಂಡ ಸಾಧನೆ ಮಾಡಿದ್ದರು. ಅವರು, ಅಗೌರವ ತೋರುವ ಭಾಷೆ, ಸನ್ನೆ ಬಳಸಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಆಕ್ರಮಣಕಾರಿ ರೀತಿಯಲ್ಲಿ ಪ್ರಚೋದನೆ ನೀಡಿದ್ದಾರೆ ಎಂದು ಐಸಿಸಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು