ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ VS ನ್ಯೂಜಿಲೆಂಡ್: ಧೋನಿ–ಜಡೇಜ ವಿರೋಚಿತ ಹೋರಾಟ, ಭಾರತದ ಫೈನಲ್ ಕನಸು ಭಗ್ನ

ಮ್ಯಾಚ್ ಗೆಲ್ಲಿಸಿದ ಮ್ಯಾಟ್ ಹೆನ್ರಿ
Last Updated 11 ಜುಲೈ 2019, 1:06 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಹಿರಿಯ ಆಟಗಾರ ಮಹೇಂದ್ರಸಿಂಗ್ ಧೋನಿ ಅವರಿಗೆ ವಿಶ್ವಕಪ್ ವಿಜಯದೊಂದಿಗೆ ವಿದಾಯ ಹೇಳುವ ವಿರಾಟ್ ಕೊಹ್ಲಿ ಬಳಗದ ಕನಸು ಬುಧವಾರ ಭಗ್ನವಾಯಿತು.

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗ ಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಧೋನಿ ಅವರ ರನ್‌ಔಟ್‌ನೊಂದಿಗೆ ಭಾರತ ತಂಡದ ಫೈನಲ್ ಹಾದಿಯು ಮುಚ್ಚಿದ್ದು ಕಾಕತಾಳೀಯ. ರವೀಂದ್ರ ಜಡೇಜ ವಿರೋಚಿತ ಬ್ಯಾಟಿಂಗ್ ಅಭಿಮಾನಿಗಳ ನೆನಪಿನ ಪುಟಗಳಲ್ಲಿ ಅಚ್ಚಾಯಿತು.

ಮಳೆರಾಯನ ಆರ್ಭಟದಿಂದಾಗಿ ಸುಮಾರು ಎರಡು ದಿನ ನಡೆದ ಈ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 18 ರನ್‌ಗಳಿಂದ ಗೆದ್ದು ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿತು. ಮಂಗಳವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅವರು ಅರ್ಧಶತಕಗಳನ್ನು ದಾಖಲಿಸಿದ್ದರು. ಆದರೆ ಕಿವೀಸ್ ತಂಡವು 46.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 211 ರನ್‌ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತ್ತು. ಆದ್ದರಿಂದ ಆಟವನ್ನು ಕಾಯ್ದಿಟ್ಟ ದಿನವಾದ ಬುಧವಾರಕ್ಕೆ ಮುಂದೂಡಲಾಗಿತ್ತು. ಮುಂದುವರಿದ ಆಟದಲ್ಲಿ 3.5 ಓವರ್‌ಗಳಲ್ಲಿ 28 ರನ್‌ ಸೇರಿಸಿ, ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತ ತಂಡಕ್ಕೆ 240 ರನ್‌ಗಳ ಗುರಿ ನೀಡಿತು.

ಆದರೆ, ಭಾರತ ತಂಡವು ಆರಂಭದಲ್ಲಿಯೇ ಎಡವಿತು.ಐದು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತು. ಟೂರ್ನಿಯಲ್ಲಿ ಐದು ಶತಕ ಹೊಡೆದಿದ್ದ ರೋಹಿತ್ ಶರ್ಮಾ ಮತ್ತು ಹೋದ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿದ್ದ ಕೆ.ಎಲ್ ರಾಹುಲ್ ಅವರಿಗೆ ಮ್ಯಾಟ್‌ ಹೆನ್ರಿ ಪೆವಿಲಿಯನ್ ದಾರಿ ತೋರಿಸಿದರು. ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೆಂಟ್ ಬೌಲ್ಟ್‌ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಯುಡಿಆರ್‌ಎಸ್‌ ಕೂಡ ಕೊಹ್ಲಿಗೆ ನೆರವಾಗಲಿಲ್ಲ. ‌

ಬ್ಯಾಟಿಂಗ್‌ ಮಾಡುವುದು ಕಷ್ಟವಾಗಿದ್ದ ಪಿಚ್‌ನಲ್ಲಿ ಒಂದೊಂದು ರನ್‌ ಗಳಿಸುವುದೂ ದುಸ್ತರವಾಗಿತ್ತು. ವೇಗಿಗಳು ಎಸೆಯುತ್ತಿದ್ದ ಹೊಸಚೆಂಡಿನ ಹೊಳಪು ಮತ್ತು ಲಯವನ್ನು ಗುರು ತಿಸುವಲ್ಲಿ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ನಿಧಾನಗತಿಯ ಎಸೆತಗಳಿಗೆ ತಲೆದಂಡ ಕೊಟ್ಟರು. ಎಚ್ಚರಿಕೆ ಆಟಕ್ಕೆ ಮೊರೆ ಹೋದ ದಿನೇಶ್ ಕಾರ್ತಿಕ್ 20 ಎಸೆತಗಳನ್ನು ಆಡಿಯೂ ಖಾತೆ ತೆರೆಯಲಿಲ್ಲ. 21ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಆದರೆ, ಅವರು ಗಳಿಸಿದ್ದು ಕೇವಲ ಆರು ರನ್. ಅವರನ್ನೂ ಹೆನ್ರಿ ಔಟ್ ಮಾಡಿದರು.

ಭಾರತದ ಸೋಲಿನಿಂದ ನಿರಾಸೆಗೊಂಡ ಪುಟಾಣಿ ಅಭಿಮಾನಿಗಳು –ರಾಯಿಟರ್ಸ್ ಚಿತ್ರ
ಭಾರತದ ಸೋಲಿನಿಂದ ನಿರಾಸೆಗೊಂಡ ಪುಟಾಣಿ ಅಭಿಮಾನಿಗಳು –ರಾಯಿಟರ್ಸ್ ಚಿತ್ರ

ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ (32; 56ಎಸೆತ, 4ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ (32; 62ಎಸೆತ, 2ಬೌಂಡರಿ) ಅವರು ಇನಿಂಗ್ಸ್‌ಗೆ ಜೀವ ತುಂಬುವ ಪ್ರಯತ್ನ ಮಾಡಿದರು. ಆದರೆ ತಾಳ್ಮೆ ಕಳೆದುಕೊಂಡು ಆಡಿದ ಕೆಟ್ಟ ಹೊಡೆತಗಳಿಗೆ ಇಬ್ಬರೂ ದಂಡ ತೆತ್ತರು. ಅದು ತಂಡಕ್ಕೆ ಭಾರವಾಯಿತು. ಈ ಹಂತದಲ್ಲಿ ತಂಡದ ಸ್ಥಿತಿ 30.3 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 92 ರನ್‌.

ಇನ್ನೊಂದು ಬದಿಯಲ್ಲಿ ಅಪಾರ ತಾಳ್ಮೆಯಿಂದ ಆಡುತ್ತಿದ್ದ ಮಹೇಂದ್ರಸಿಂಗ್ ಧೋನಿಯೊಂದಿಗೆ ಸೇರಿದ ರವೀಂದ್ರ ಜಡೇಜ ಇನಿಂಗ್ಸ್‌ನ ಚಹರೆಯನ್ನೇ ಬದಲಿಸಿಬಿಟ್ಟರು. 33ನೇ ಓವರ್‌ನಲ್ಲಿ ಅವರು ಜಿಮ್ಮಿ ನಿಶಾಮ್ ಎಸೆತವನ್ನು ಸಿಕ್ಸರ್‌ಗೆ ಎತ್ತಿದಾಗ ಭಾರತದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆವರಿಸಿದ್ದ ಹತಾಶೆಯ ಛಾಯೆಯು ಕರಗತೊಡಗಿತು.

ರವಿಶಾಸ್ತ್ರಿ, ವಿರಾಟ್, ರೋಹಿತ್ ಶರ್ಮಾ, ರಾಹುಲ್ ಮತ್ತಿತರ ಮೊಗದಲ್ಲಿ ಸಮಾಧಾನಭಾವ ಇಣುಕಿತು. 48ನೇ ಓವರ್‌ನವರೆಗೂ ಹೋರಾಟ ಮಾಡಿದ ಧೋನಿ–ಜಡೇಜ ಜೋಡಿಯ ಆಟವು ಭಾರತವನ್ನು ಮತ್ತೆ ಗೆಲುವಿನ ಹಾದಿಗೆ ತಂದು ನಿಲ್ಲಿಸಿತು. ಜಡೇಜ ವೇಗದ ಆಟಕ್ಕೆ ಒತ್ತುಕೊಟ್ಟರು. ಆದರೆ ಧೋನಿ ಎಚ್ಚರಿಕೆಯ ಆಟವಾಡಿದರು.

48ನೇ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಎಸೆತವನ್ನು ಮೇಲಕ್ಕೆತ್ತಿದ್ದ ಜಡೇಜ ತಪ್ಪು ಮಾಡಿದ್ದರು. ಗಾಳಿಯನ್ನು ಸೀಳಿ ಆಗಸದತ್ತ ನುಗ್ಗಿದ್ದ ಚೆಂಡು ಬೌಂಡರಿಲೈನ್‌ನತ್ತ ಸಾಗಲಿಲ್ಲ. ಅದರ ಮೇಲಿನ ದೃಷ್ಟಿಯನ್ನು ಕದಲಿಸದೇ ಹಿಂಬಾಲಿಸಿದ ಫೀಲ್ಡರ್ ಕೇನ್ ವಿಲಿಯಮ್ಸನ್ ಅಮೋಘ ಕ್ಯಾಚ್ ಪಡೆದರು. ಏಳನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ಮುರಿದುಬಿದ್ದಿತು. ಕ್ರೀಸ್‌ನಲ್ಲಿದ್ದ ಧೋನಿ ಮೇಲೆ ಎಲ್ಲರ ಭರವಸೆ ಕಣ್ಣುಗಳು ನೆಟ್ಟಿದ್ದವು.

ಆದರೆ 49ನೇ ಓವರ್‌ನಲ್ಲಿ ಎರಡನೇ ರನ್ ಓಡಿದ ಧೋನಿಗೆ ಫೀಲ್ಡರ್ ಮಾರ್ಟಿನ್ ಗಪ್ಟಿಲ್ ಅವರ ನೇರ ಥ್ರೋ ಮುಳುವಾಯಿತು. ಕ್ರೀಸ್‌ನಿಂದ ಕೂದಲೆಳೆಯಷ್ಟು ದೂರದಲ್ಲಿ ಧೋನಿ ಬ್ಯಾಟ್‌ ಇತ್ತು. ಅಲ್ಲಿಗೆ ಕಿವೀಸ್ ಸತತ ಎರಡನೇ ಬಾರಿ ವಿಶ್ವಕಪ್ ಟೂರ್ನಿಯ ಫೈನಲ್ ತಲುಪುವುದುಖಚಿತವಾಯಿತು. ಭಾರತದ ಅಭಿಮಾನಿಗಳ ಕಂಗಳದಲ್ಲಿ ನಿರಾಶೆ ಧಾರೆಯಾಯಿತು.

ಭಾರತದ ಸೋಲಿಗೆ ಕಣ್ಣೀರು ಹಾಕಿದ ಅಭಿಮಾನಿ –ಎಎಫ್‌ಪಿ ಚಿತ್ರ
ಭಾರತದ ಸೋಲಿಗೆ ಕಣ್ಣೀರು ಹಾಕಿದ ಅಭಿಮಾನಿ –ಎಎಫ್‌ಪಿ ಚಿತ್ರ

‘ಮುಕ್ಕಾಲು ಗಂಟೆಯ ಕೆಟ್ಟ ಆಟ ಮುಳುವಾಯಿತು’
‘ಬುಧವಾರದ ಇನಿಂಗ್ಸ್‌ನಲ್ಲಿ ಮೊದಲ 45 ನಿಮಿಷಗಳ ಕೆಟ್ಟ ಆಟವು ನಮ್ಮ ಸೋಲಿಗೆ ಕಾರಣ ವಾಯಿತು’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಟೂರ್ನಿಯಲ್ಲಿ ಶ್ರೇಷ್ಠವಾದ ಆಟವು, ಇಂದಿನ ಮುಕ್ಕಾಲು ಗಂಟೆಯ ಕಳಪೆ ಆಟದಿಂದಾಗಿ ವ್ಯರ್ಥವಾಯಿತು. ಇದರಿಂದಾಗಿ ಬಹಳ ಬೇಸರವಾಗಿದೆ’ ಎಂದರು.

‘ನ್ಯೂಜಿಲೆಂಡ್ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಅದರಲ್ಲೂ ಹೊಸ ಚೆಂಡಿನಲ್ಲಿ ಅವರು ಪರಿಣಾಮಕಾ
ರಿಯಾಗಿ ಆಡಿದರು. ಸ್ವಿಂಗ್, ಲೈನ್ ಮತ್ತು ಲೆಂಗ್ತ್‌ ನಿರ್ವಹಿಸಿದರು’ ಎಂದು ಅವರು ಹೇಳಿದರು.

‘ಜಡೇಜ ಮತ್ತು ಧೋನಿ ಅವರ ಆಟವು ಅಮೋಘವಾಗಿತ್ತು. ಜಡೇಜ ದಿಟ್ಟ ಆಟವು ಅವಿಸ್ಮರಣೀಯ’ ಎಂದರು.

ನಿವೃತ್ತಿಯ ಬಗ್ಗೆ ಧೋನಿ ಹೇಳಿಲ್ಲ: ಮಹೇಂದ್ರಸಿಂಗ್ ಧೋನಿ ಅವರು ತಮ್ಮ ನಿವೃತ್ತಿಯ ಕುರಿತು ನಮ್ಮ ಮುಂದೆ ಏನೂ ಹೇಳಿಕೊಂಡಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದರು.

ಧೋನಿಯ ನಿಧಾನಗತಿಯ ಬ್ಯಾಟಿಂಗ್‌ ಅನ್ನು ಸಮರ್ಥಿಸಿಕೊಂಡರು. ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದರು.

ಧೋನಿ ಕ್ರೀಸ್‌ಗೆ ಬಂದಾಗ ಭಾರತ ತಂಡವು 71 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

‘ಇನಿಂಗ್ಸ್‌ ಕಟ್ಟುವ ಯೋಚನೆ ಧೋನಿಯದ್ದಾಗಿರಬಹುದು. ಇನ್ನೊಂದು ಬದಿಯಲ್ಲಿ ಜಡೇಜ ಬೀಸಾಟವಾಡಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅವರು ತಾಳ್ಮೆಯ ಆಟವಾಡಿದರು. ನೂರು ರನ್‌ಗಳಿಗೂ ಹೆಚ್ಚಿನ ಜೊತೆಯಾಟವನ್ನು ಅವರು ಆಡಿದರು. ಆ ಸ್ಥಿತಿಯಲ್ಲಿ ಅದು ಅತ್ಯಮೂಲ್ಯವಾಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಹೊರಗೆ ಕುಳಿತು ಟೀಕಿಸುವುದು ಸುಲಭ. ನಾವು ಕೆಲವು ಲೋಪಗಳನ್ನು ಮಾಡಿದ್ದನ್ನು ಒಪ್ಪಿಕೊಳ್ಳುತ್ತೇವೆ’ ಎಂದರು.

ಧೋನಿ ವಿಕೆಟ್ ಮಹತ್ವದ್ದು: ಕೇನ್
‘ಮಹೇಂದ್ರಸಿಂಗ್ ಧೋನಿ ಅವರು ರನ್‌ಔಟ್ ಆಗಿದ್ದು ಪಂದ್ಯಕ್ಕೆ ಮುಖ್ಯ ತಿರುವು ಲಭಿಸಿತ್ತು. ಅದರಿಂದಾಗಿ ನಮಗೆ ಗೆಲುವು ಸಾಧ್ಯವಾಯಿತು’ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT