ದುಬೈ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರು ಬುಧವಾರ ಪ್ರಕಟಿಸಲಾದ ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 37ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ್ದ ಬ್ಯಾಟರ್ ಇಶಾನ್ ಕಿಶನ್ ಟೀಮ್‌ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸಿದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದ ಕಿಶನ್, ಇತ್ತೀಚಿನ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಈ ಅದ್ಭುತ ಇನ್ನಿಂಗ್ಸ್‌ನ ಲಾಭ ಪಡೆದಿದ್ದಾರೆ.
ಇಂದು ಬಿಡುಗಡೆ ಮಾಡಿರುವ ಏಕದಿನ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನಗಳ ಜಿಗಿತ ಕಂಡಿರುವ ಕಿಶನ್ 37ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಈ ಪಂದ್ಯದಲ್ಲಿ ಇಶಾನ್ ಜೊತೆ ವಿರಾಟ್ ಕೊಹ್ಲಿ ಕೂಡ ಶತಕ ಬಾರಿಸಿದ್ದು, ಅವರಿಗೂ ರ‍್ಯಾಂಕಿಂಗ್‌ನಲ್ಲಿ ಮುಂಬಡ್ತಿ ದೊರೆತಿದೆ.
ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಬಡ್ತಿ ಪಡೆದಿರುವ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳನ್ನು ಎದುರಿಸಿ 113 ರನ್ ಗಳಿಸಿದ್ದರು.
ಢಾಕಾದಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಎರಡನೇ ಪಂದ್ಯದಲ್ಲಿ 82 ರನ್ ಗಳಿಸಿದ ನಂತರ ಶ್ರೇಯಸ್ ಅಯ್ಯರ್ ಕೂಡ ರ‍್ಯಾಂಕಿಂಗ್‌ನಲ್ಲಿ 20ರಿಂದ 15ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ನಾಯಕ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.