ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ವಿಶ್ವಕಪ್‌ ಮುಂದೂಡಿದ ಐಸಿಸಿ: ಐಪಿಎಲ್‌ ಆಯೋಜನೆಗೆ ಒದಗಿದ ಅವಕಾಶ

Last Updated 20 ಜುಲೈ 2020, 19:01 IST
ಅಕ್ಷರ ಗಾತ್ರ

ದುಬೈ:ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯನ್ನು ಕೋವಿಡ್‌ –19 ಹಾವಳಿಯ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸೋಮವಾರ ಮುಂದೂಡಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಾದಿ ಸುಗಮವಾಗಿದೆ. ಅಕ್ಟೋಬರ್‌–ನವೆಂಬರ್‌ ತಿಂಗಳಲ್ಲಿ ಟೂರ್ನಿಯ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ.

ಸೋಮವಾರ ರಾತ್ರಿ ಆನ್‌ಲೈನ್ ಮೂಲಕ ನಡೆದ ಸಭೆಯಲ್ಲಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ವಿಶ್ವಕಪ್ ಆಯೋಜಿಸಲು ಐಸಿಸಿ ನಿರ್ಧರಿಸಿತ್ತು. ಆದರೆ ಕೊರೊನಾ ಸೋಂಕು ಮುಂದುವರಿದ ಕಾರಣ ಪ್ರೇಕ್ಷಕರಿಗೆ ನಿರ್ಬಂಧ ಹಾಕಿ ಇಂಥ ಮಹತ್ವದ ಟೂರ್ನಿಯನ್ನು ಆಯೋಜಿಸಲು ಕಷ್ಟವಾಗಬಹುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಮೇ ತಿಂಗಳಲ್ಲೇ ತಿಳಿಸಿತ್ತು.

ಟೂರ್ನಿಯನ್ನು ನಡೆಸಿದರೂ, ಭಾಗವಹಿಸುವ 16 ತಂಡಗಳಿಗೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ಮಾಡಬೇಕಿತ್ತು. ಇದು ಕ್ರಿಕೆಟ್ ಆಸ್ಟ್ರೇಲಿಯಾದ ತಲೆನೋವಿಗೆ ಕಾರಣವಾಗಿತ್ತು. ಆಸ್ಟ್ರೇಲಿಯಾದ ನಿರ್ಧಾರ ಐಸಿಸಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಅದು ಟೂರ್ನಿಯ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿರಲಿಲ್ಲ. ಹೀಗಾಗಿ ಐಪಿಎಲ್ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಬಿಸಿಸಿಐಗೂ ಸಾಧ್ಯವಾಗಿರಲಿಲ್ಲ. ಇದೀಗ ವಿಶ್ವಕಪ್ ಮುಂದೂಡಿರುವುದರಿಂದ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭಿಸಿ ನವೆಂಬರ್ ಎರಡನೇ ವಾರದಲ್ಲಿ ಮುಗಿಸುವ ಸಾಧ್ಯತೆ ಇದೆ. ಭಾರತದಲ್ಲಿ ನಡೆಸಲು ಉದ್ದೇಶಿಸಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನು 2023ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ವಿಶ್ವಕಪ್ ನಡೆಯುವುದಾದರೆ ಸಾಮಾನ್ಯವಾಗಿ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. 1996 ಮತ್ತು 2011ರಲ್ಲಿ ಈ ಅವಧಿಯಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿರುವ ಕಾರಣ ಎಲ್ಲ ವೇಳಾಪಟ್ಟಿಯಲ್ಲೂ ಬದಲಾವಣೆ ಆಗುತ್ತಿದೆ. ನ್ಯೂಜಿಲೆಂಡ್‌ನಲ್ಲಿ ಮುಂದಿನ ವರ್ಷ ನಡೆಸಲು ಉದ್ದೇಶಿಸಿರುವ ಮಹಿಳೆಯರ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯೂ ಪರಿಶೀಲನೆ ನಡೆಸಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲೇ ನಡೆದರೆ ಟಿಕೆಟ್ ಮಾನ್ಯ

ಮುಂದೂಡಿರುವ ಟಿ–20 ವಿಶ್ವಕಪ್‌ ಟೂರ್ನಿಯನ್ನು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲೇ ನಡೆಸುವುದಾದರೆ ಈಗಾಗಲೇ ಖರೀದಿಸಿರುವ ಟಿಕೆಟ್‌ಗಳು ಮಾನ್ಯವಾಗಿರುತ್ತವೆ. ಒಂದು ವೇಳೆ ಟೂರ್ನಿಗೆ ಭಾರತ ಆತಿಥ್ಯ ವಹಿಸಿದರೆ ಹೊಸತಾಗಿ ಟಿಕೆಟ್ ಪಡೆದುಕೊಳ್ಳಬೇಕಾಗುತ್ತದೆ. 2022ಕ್ಕೆ ಟೂರ್ನಿಯನ್ನು ಮುಂದೂಡಿದರೆ ಈಗಾಗಲೇ ಮಾರಾಟವಾಗಿರುವ ಟಿಕೆಟ್‌ಗಳ ದರವನ್ನು ಹಿಂತಿರುಗಿಸಲಾಗುವುದು ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಯಾವ ಆವೃತ್ತಿಯನ್ನು ಯಾವ ದೇಶ ಆಯೋಜಿಸಲಿದೆ ಎಂಬುದನ್ನು ಐಸಿಸಿ ಇನ್ನೂ ಸ್ಪಷ್ಟಪಡಿಸಿಲ್ಲ. ಈ ಬಾರಿ ನಡೆಸಬೇಕಾಗಿದ್ದ ಟೂರ್ನಿಯ ಟಿಕೆಟ್‌ಗಳ ಮಾರಾಟದ ಹಕ್ಕನ್ನು ಏಜೆನ್ಸಿಗಳಿಗೆ ಈಗಾಗಲೇ ನೀಡಿದ್ದು ಸಾಕಷ್ಟು ಸಂಖ್ಯೆಯ ಟಿಕೆಟ್‌ಗಳು ಮಾರಾಟವಾಗಿವೆ. ಹಣ ವಾಪಸ್ ಪಡೆದುಕೊಳ್ಳಲು ಈ ವರ್ಷದ ಡಿಸೆಂಬರ್ 15ರ ವರೆಗೆ ಅವಕಾಶವಿದೆ ಎಂದು ಐಸಿಸಿ ತಿಳಿಸಿದೆ.

ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಯುಎಇಯಲ್ಲಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಈ ಕುರಿತು ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಭಾರತದಲ್ಲಿ ಸದ್ಯ ಕೊರೊನಾ ಹಾವಳಿ ವಿಪರೀತವಾಗಿರುವ ಕಾರಣ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಭಾರತದಲ್ಲೇ ನಡೆಸುವುದಾದರೆ ಅವಳಿನಗರಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ಅವಕಾಶ ನೀಡದೆ ಬಯೊ ಸೆಕ್ಯುರ್ ವ್ಯವಸ್ಥೆಯಲ್ಲಿ ಪಂದ್ಯಗಳನ್ನು ನಡೆಸಬೇಕಾಗುತ್ತದೆ.

’ಈ ವರೆಗೆ ಐಸಿಸಿಯ ನಿರ್ಧಾರಕ್ಕಾಗಿ ಕಾಯುತ್ತಿದ್ದೆವು. ಇನ್ನು ನಮ್ಮ ಚಟುವಟಿಕೆಯನ್ನು ಮುಂದುವರಿಸಬಹುದಾಗಿದೆ’ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು. ಐಪಿಎಲ್ ಟೂರ್ನಿ ಈ ವರ್ಷವೇ ನಡೆಯುವ ಸಾಧ್ಯತೆಗಳು ಇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆಯೇ ಭರವಸೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT