ಮಂಗಳವಾರ, ಫೆಬ್ರವರಿ 18, 2020
25 °C

ಕ್ರೀಡಾಸ್ಫೂರ್ತಿ: ಎದುರಾಳಿ ತಂಡದ ಗಾಯಾಳನ್ನು ಹೊತ್ತೊಯ್ದ ಕಿವೀಸ್ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆನೋನಿ (ದಕ್ಷಿಣ ಆಫ್ರಿಕಾ): 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಎರಡನೇ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿರುವ ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ಇಲ್ಲಿನ ವಿಲ್ಲೋವ್‌ಮೂರೆ ಕ್ರಿಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮನ ಗೆದ್ದರು.

ವಿಂಡೀಸ್‌ ಪರ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕೊನೆವರೆಗೂ ಆಡಿ 99 ರನ್‌ ಗಳಿಸಿದ್ದ ಕಿರ್ಕ್‌ ಮೆಕೆಂಜೆ 47.5ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಅವರ ವಿಕೆಟ್‌ ಪತನದೊಂದಿಗೆ ವಿಂಡೀಸ್‌ ಇನಿಂಗ್ಸ್‌ಗೆ ತೆರೆ ಬಿದ್ದಿತು. ಆದರೆ, ಬ್ಯಾಟಿಂಗ್‌ ವೇಳೆ ಗಾಯಗೊಂಡಿದ್ದ ಕಿರ್ಕ್‌ ಪೆವಿಲಿಯನ್‌ನತ್ತ ಹೆಜ್ಜೆ ಹಾಕಲು ಕಷ್ಟಪಡುತ್ತಿದ್ದರು.

ಈ ವೇಳೆ ನ್ಯೂಜಿಲೆಂಡ್‌ ತಂಡದ ನಾಯಕ ಜೆಸ್ಸೆ ತಷ್ಕೊಫ್‌ ಮತ್ತು ಜೋಯ್‌ ಫೀಲ್ಡ್‌, ಕಿರ್ಕ್‌ ಅವರನ್ನು ಬೌಂಡರಿ ಲೈನ್‌ವರೆಗೆ ಹೊತ್ತೊಯ್ದರು.

ಈ ದೃಶ್ಯವನ್ನು ಕ್ರಿಕೆಟ್‌ ವರ್ಲ್ಡ್‌ ಕಪ್‌ ತನ್ನ ಟ್ವಿಟರ್‌ ಪುಟದಲ್ಲಿ ಹಾಕಿಕೊಂಡಿದ್ದು, ‘ಕಿವೀಸ್‌ ತಂಡದ ಅತ್ಯುತ್ತಮ ನಡೆ ಇದು’ ಮತ್ತು ‘ಭವಿಷ್ಯದ ತಾರೆಗಳು’ ಎಂದು ಬಣ್ಣಿಸಿದೆ. ಇದೇ ವಿಡಿಯೊವನ್ನು ಐಸಿಸಿಯೂ ಹಂಚಿಕೊಂಡಿದೆ. ಆಟಗಾರರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್‌ 47.5 ಓವರ್‌ಗಳಲ್ಲಿ ಆಲೌಟ್‌ 238 ರನ್‌ ಗಳಿಸಿ ಆಯಿತು.

ಬಳಿಕ ಬ್ಯಾಟಿಂಗ್‌ ಆರಂಭಿಸಿರುವ ನ್ಯೂಜಿಲೆಂಡ್‌ 49.4 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 239 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು