ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಆತಿಥೇಯ ವಿಂಡೀಸ್ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಜಯ

Published 20 ಜೂನ್ 2024, 4:22 IST
Last Updated 20 ಜೂನ್ 2024, 4:22 IST
ಅಕ್ಷರ ಗಾತ್ರ

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಆರಂಭ ಆಟಗಾರ ಫಿಲ್ ಸಾಲ್ಟ್‌ ಅವರ ಅಜೇಯ 87 ರನ್‌ಗಳ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಗುರುವಾರ ಆತಿಥೇಯ ವೆಸ್ಟ್‌ ಇಂಡೀಸ್ ತಂಡದ ಮೇಲೆ ಎಂಟು ವಿಕೆಟ್‌ಗಳ ಸುಲಭ ಗೆಲುವಿನೊಡನೆ ಟಿ20 ವಿಶ್ವಕಪ್‌ ಸೂಪರ್ ಎಂಟರ ಹಂತದ ಅಭಿಯಾನವನ್ನು ಅಮೋಘವಾಗಿ ಆರಂಭಿಸಿತು.

ಮೊದಲು ಆಡಿದ ವೆಸ್ಟ್‌ ಇಂಡೀಸ್‌ 4 ವಿಕೆಟ್‌ಗೆ 180 ರನ್ ಪೇರಿಸಿತು. ಆದರೆ ಇಂಗ್ಲೆಂಡ್ 17.3 ಓವರುಗಳಲ್ಲೇ 2 ವಿಕೆಟ್‌ಗೆ 181 ರನ್ ಹೊಡೆದು ಸುಲಭವಾಗಿ ಗುರಿತಲುಪಿತು.

ಸಾಲ್ಟ್‌ 47 ಎಸೆತಗಳ ಬ್ಯಾಟಿಂಗ್‌ನಲ್ಲಿ ಏಳು ಬೌಂಡರಿ, ಐದು ಸಿಕ್ಸರ್‌ಗಳನ್ನು ಹೊಡೆದರು. ಅವರಿಗೆ ಜಾನಿ  ಬೇಸ್ಟೊ (ಔಟಾಗದೇ 48, 26ಎ, 4x5, 6x2) ಬೆಂಬಲ ನೀಡಿದರು. ಇವರಿಬ್ಬರ ನಡುವೆ ಮುರಿಯದ ಮೂರನೇ ವಿಕೆಟ್‌ಗೆ 44 ಎಸೆತಗಳಲ್ಲಿ 97 ರನ್‌ಗಳು ಹರಿದುಬಂದವು.

ಏಳು ರನ್ ಗಳಿಸಿದ್ದಾಗ ಅಖೀಲ್ ಹುಸೇನ್ ಬೌಲಿಂಗ್‌ನಲ್ಲಿ ನಿಕೋಲಸ್ ಪೂರನ್ ಅವರಿಂದ ಪಡೆದ ಜೀವದಾನದ ಲಾಭವನ್ನು ಸಾಲ್ಟ್‌ ಸಮರ್ಥವಾಗಿ ಬಳಸಿಕೊಂಡರು. ರೊಮಾರಿಯೊ ಶೆಫರ್ಡ್‌ ಅವರ (ಇನಿಂಗ್ಸ್‌ನ 16ನೇ) ಓವರ್‌ನಲ್ಲಿ ಅವರು ಮೂರು ಸಿಕ್ಸರ್‌, ಮೂರು ಬೌಂಡರಿ  ಸಹಿತ 30 ರನ್ ಬಾಚಿದ್ದರಿಂದ ಗೆಲುವು ನಿರೀಕ್ಷೆಗಿಂತ ಬೇಗ ದಾಖಲಾಯಿತು.

ಆದರೆ ಇಂಗ್ಲೆಂಡ್‌ ಬೌಲರ್‌ಗಳಿಗೂ ಗೆಲುವಿನ ಸಮಾನ ಶ್ರೇಯ ಸಲ್ಲಬೇಕು. ಜೋಸ್‌ ಬಟ್ಲರ್‌ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ನಂತರ ಬೌಲರ್‌ಗಳು 51 ಡಾಟ್‌ ಬಾಲ್‌ಗಳನ್ನು ಮಾಡಿದರು. ವೇಗಿ ಜೋಫ್ರಾ ಅರ್ಚರ್ (34ಕ್ಕೆ1) ಮತ್ತು ಅದಿಲ್‌ ರಶೀದ್‌ (21ಕ್ಕೆ1) ಅವರು ವೆಸ್ಟ್ ಇಂಡೀಸ್‌ ತಂಡವನ್ನು 200ರ ಗಡಿಯೊಳಗೆ ಕಟ್ಟಿಹಾಕಿದರು.

ಈ ಸೋಲಿನಿಂದ ವೆಸ್ಟ್‌ ಇಂಡೀಸ್‌ನ ಮುಂದಿನ ಎರಡೂ ಪಂದ್ಯಗಳನ್ನು (ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ) ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು.

ಇದಕ್ಕೆ ಮೊದಲು ವಿಂಡೀಸ್‌ ಪರ ನಿಕೋಲಸ್ ಪೂರನ್ (36, 32ಎ), ನಾಯಕ ರೋವ್ಮನ್ ಪೊವೆಲ್‌ (36, 17ಎ) ಆಕ್ರಮಣಕಾರಿಯಾಗಿ ಆಡಿದರು. ಕೊನೆಯಲ್ಲಿ ಶರ್ಫೇನ್ ರುದರ್‌ಫೋರ್ಡ್‌ 15 ಎಸೆತಗಳಲ್ಲಿ 28 ರನ್ ಗಳಿಸಿದರು.

ಸ್ಕೋರುಗಳು:

ವೆಸ್ಟ್‌ ಇಂಡೀಸ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 180 (ಬ್ರಾಂಡನ್ ಕಿಂಗ್ 23, ಜಾನ್ಸನ್ ಚಾರ್ಲ್ಸ್‌ 38, ನಿಕೋಲಸ್ ಪೂರನ್ 36, ರೋವ್ಮನ್ ಪೊವೆಲ್ 36, ಶರ್ಫೇನ್ ರುದರ್‌ಫೋರ್ಡ್‌ ಔಟಾಗದೇ 28; ಅದಿಲ್ ರಶೀದ್‌ 21ಕ್ಕೆ1, ಮೊಯಿನ್ ಅಲಿ 15ಕ್ಕೆ1);

ಇಂಗ್ಲೆಂಡ್‌: 17.3 ಓವರುಗಳಲ್ಲಿ 2 ವಿಕೆಟ್‌ಗೆ 181 (ಫಿಲ್ ಸಾಲ್ಟ್‌ ಔಟಾಗದೇ 87, ಜಾನಿ ಬೇಸ್ಟೊ ಔಟಾಗದೇ 48; ರಸೆಲ್ 21ಕ್ಕೆ1, ರೋಸ್ಟನ್ ಚೇಸ್‌ 19ಕ್ಕೆ1). ಪಂದ್ಯದ ಆಟಗಾರ: ಫಿಲ್‌ ಸಾಲ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT