ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಪಂಜಾಬ್‌ಗೆ ಇಂದು ಎಸ್‌ಆರ್‌ಎಚ್‌ ಸವಾಲು

ಎರಡು ಗೆದ್ದು, ಎರಡು ಸೋತಿರುವ ಉಭಯ ತಂಡಗಳು
Published 9 ಏಪ್ರಿಲ್ 2024, 0:09 IST
Last Updated 9 ಏಪ್ರಿಲ್ 2024, 0:09 IST
ಅಕ್ಷರ ಗಾತ್ರ

ಮುಲ್ಲನಪುರ (ಪಂಜಾಬ್‌): ಒಂದೆಡೆ ಪಂಜಾಬ್ ಕಿಂಗ್ಸ್‌ ತಂಡ ಒಮ್ಮೆ ಉತ್ತಮ, ಒಮ್ಮೆ ಕಳಪೆ ಪ್ರದರ್ಶನ ನೀಡುತ್ತಿದ್ದರೆ, ಇನ್ನೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ ಆಕ್ರಮಣಕಾರಿಯಾಗಿ ಆಡುತ್ತಿದೆ. ಮಂಗಳವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ.

ಎರಡೂ ತಂಡಗಳು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಎರಡು ಸೋಲುಗಳನ್ನು ಕಂಡಿವೆ. ಹೀಗಾಗಿ ಈ ಹಂತದಲ್ಲಿ ಜಯಕ್ಕಾಗಿ ಹಾತೊರೆಯಲಿವೆ. ನೂತನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಐಪಿಎಲ್‌ ಪಂದ್ಯ ಇದು.

ಸನ್‌ರೈಸರ್ಸ್‌ ತಂಡದ ಬ್ಯಾಟರ್‌ಗಳು ಎರಡು ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಹಾದಿಯಲ್ಲಿ ಸನ್‌ರೈಸರ್ಸ್‌ ತಂಡ ಐಪಿಎಲ್‌ನಲ್ಲೇ ದಾಖಲೆ ಮೊತ್ತ (277) ಕಲೆಹಾಕಿತ್ತು. ಹಿಂದಿನ ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧವೂ ಆರು ವಿಕೆಟ್‌ ಗೆಲುವಿನ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿತ್ತು.

ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌, ಹೆನ್ರಿಚ್‌ ಕ್ಲಾಸೆನ್‌ ಮತ್ತು ಏಡನ್‌ ಮರ್ಕರಂ ಅವರಂಥ ಆಟಗಾರರು ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋಗಬಲ್ಲ ಸಮರ್ಥರು.

ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾಯಕ ಶಿಖರ್ ಧವನ್, ಜಾನಿ ಬೇಸ್ಟೊ, ಲಿಯಾಮ್ ಲಿವಿಂಗ್‌ಸ್ಟೋನ್ ಅಂಥ ಬ್ಯಾಟರ್‌ಗಳಿದ್ದಾರೆ. ಆದರೆ ಧವನ್ ಅವರನ್ನುಳಿದು ಉಳಿದವರು ಸ್ಥಿರ ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಿ ಯಾರೂ ನಿರೀಕ್ಷಿಸದ ರೀತಿ ಶಶಾಂಕ್ ಸಿಂಗ್‌ (29 ಎಸೆತಗಳಲ್ಲಿ 61) ಭರ್ಜರಿ ಆಟವಾಡಿ ಗುಜರಾತ್‌ ಟೈಟನ್ಸ್ ವಿರುದ್ಧ ಗೆಲುವು ತಂದುಕೊಟ್ಟಿದ್ದರು. ತಂಡ ಪ್ರಭಸಿಮ್ರನ್ ಸಿಂಗ್ ಮತ್ತು ಭಾರತ ತಂಡದ ಆಟಗಾರ ಜಿತೇಶ್ ಶರ್ಮಾ ಅವರಿಂದ ಉತ್ತಮ ಕೊಡುಗೆಯ ನಿರೀಕ್ಷೆಯಲ್ಲಿದೆ.

ಎರಡೂ ತಂಡಗಳಿಗೆ ಬೌಲಿಂಗ್ ವಿಭಾಗದ್ದೇ ಸ್ವಲ್ಪ ಚಿಂತೆಯಿದೆ. ಪಂಜಾಬ್‌ ‘ಡೆತ್‌ ಓವರ್‌’ಗಳಲ್ಲಿ ಹೇರಳ ರನ್ ಬಿಟ್ಟುಕೊಡುತ್ತಿದೆ. ಕಗಿಸೊ ರಬಾಡ ತಂಡದ ಪ್ರಮುಖ ಬೌಲರ್‌. ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ಹೆಚ್ಚು ರನ್ ಕೊಡುತ್ತಿದ್ದಾರೆ. ಲೆಗ್‌ ಸ್ಪಿನ್ನರ್ ರಾಹುಲ್ ಚಾಹರ್ ಕೂಡ ಪರಿಣಾಮಕಾರಿ ಆಗಿಲ್ಲ. ಹರ್‌ಪ್ರೀತ್ ಬ್ರಾರ್ ಸ್ವಲ್ಪ ರನ್‌ಕೊಟ್ಟರೂ, ದುಬಾರಿ ಎನಿಸಿಲ್ಲ.

ಹೈದರಾಬಾದ್‌ಗೆ ಆರಂಭದ ಬೌಲರ್‌ಗಳದ್ದೇ ಚಿಂತೆ. ಜಯದೇವ್ ಉನದ್ಕತ್‌, ಮಯಂಕ್ ಮಾರ್ಕಂಡೆ ಮತ್ತು ಭುವನೇಶ್ವರ ಕುಮಾರ್ ಅವರು ಧಾರಾಳಿಗಳೆನಿಸಿದ್ದಾರೆ. ಅನುಭವಿಯಾಗಿದ್ದರೂ, ಭುವನೇಶ್ವರ್ ನಿರೀಕ್ಷೆಗೆ ತಕ್ಕ ನಿರ್ವಹಣೆ ನೀಡಿಲ್ಲ. ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದ ಟಿ.ನಟರಾಜನ್ ತಂಡಕ್ಕೆ ಮರಳಿದ್ದು, ಅವರು ಈವರೆಗೆ ನಾಲ್ಕು ವಿಕೆಟ್‌ ಪಡೆದಿದ್ದಾರೆ.

ನಾಯಕ ಪ್ಯಾಟ್‌ ಕಮಿನ್ಸ್‌ ನಾಲ್ಕು ಪಂದ್ಯಗಳಿಂದ ಐದು ವಿಕೆಟ್‌ ಪಡೆದಿದ್ದಾರೆ. ಅವರಿಗೆ ಇತರ ಬೌಲರ್‌ಗಳಿಂದ ಬೆಂಬಲ ದೊರೆತಿಲ್ಲ.

ಪಂದ್ಯ ಆರಂಭ: ರಾತ್ರಿ 7.30.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್.

ಪರಸ್ಪರ ಮುಖಾಮುಖಿ

ಆಡಿರುವ ಪಂದ್ಯಗಳು: 21

ಹೈದರಾಬಾದ್‌ಗೆ ಗೆಲುವು: 14

ಪಂಜಾಬ್‌ಗೆ ಗೆಲುವು 7

(ಕೊನೆಯ ಐದು ಪಂದ್ಯಗಳಲ್ಲಿ ಎಸ್‌ಆರ್‌ಎಚ್‌ ಮೂರು ಗೆದ್ದು ಎರಡು ಸೋತಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT