ಭಾನುವಾರ, ಮಾರ್ಚ್ 7, 2021
32 °C

ಸಲಾಂ ಸಿರಾಜ್ ಬಾಯ್; ಜನಾಂಗೀಯ ನಿಂದನೆಗೆ ಆಸೀಸ್ ನೆಲದಲ್ಲೇ ತಕ್ಕ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬ್ರಿಸ್ಪೇನ್: ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದಾಗ ಪಿತೃ ವಿಯೋಗದ ಅತ್ಯಂತ ಶೋಕತಪ್ತ ಸನ್ನಿವೇಶ ಎದುರಾಗಿತ್ತು. ಈ ಎಲ್ಲ ದುಃಖದ ಸನ್ನಿವೇಶ ನಿಭಾಯಿಸಿದ ಸಿರಾಜ್ ಭಾರತದ ಪರ ಚೊಚ್ಚಲ ಟೆಸ್ಟ್ ಕ್ಯಾಪ್ ಧರಿಸಿದರು. ಅಲ್ಲದೆ ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರಾಷ್ಟ್ರಗೀತೆ ವೇಳೆ ಭಾವನೆಗಳನ್ನು ತಡೆದುಕೊಳ್ಳಲಾಗದೇ ಆನಂದಭಾಷ್ಪ ಸುರಿಸಿದರು. ಪದಾರ್ಪಣೆ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಆದರೆ ಕೆಟ್ಟ ಅನುಭವ ಮಾತ್ರ ಅವರನ್ನು ಬೆಂಬಿಡದೆ ಕಾಡಿತ್ತು. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜನಾಂಗೀಯ ನಿಂದನೆ ಎದುರಾಯಿತು. ಆದರೂ ಅಚಲ ಹೃದಯವನ್ನು ಹೊಂದಿರುವ ಸಿರಾಜ್ ಕದಲಲಿಲ್ಲ. ತಮ್ಮ ಭಾವನೆ ಹದ್ದುಬಸ್ತು ಮೀರದಂತೆ ನೋಡಿಕೊಂಡರು.

ಎದುರಾಳಿಗೆ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕವೇ ಉತ್ತರ ನೀಡಿದ್ದಾರೆ. ಹೌದು, ಆಸೀಸ್ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಸಿರಾಜ್ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆತಿದೆ.

ಇದನ್ನೂ ಓದಿ: 

ಆಸ್ಟ್ರೇಲಿಯಾ ನೆಲದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಭಾರತೀಯ ಬೌಲರ್‌ನ ಈ ಸಾಧನೆಯು ಉಜ್ವಲ ಭವಿಷ್ಯವನ್ನು ನಿರೂಪಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸುವ ಆಸೀಸ್ ಇರಾದೆಗೆ ಲಗಾಮು ಹಾಕಿದ ಸಿರಾಜ್ 19.5 ಓವರ್‌ಗಳಲ್ಲಿ 73 ರನ್ ತೆತ್ತು ಐದು ವಿಕೆಟ್ ಸಾಧನೆ ಮಾಡಿದರು. ಇದರಲ್ಲಿ ಐದು ಮೇಡನ್ ಓವರ್‌ಗಳು ಸೇರಿದ್ದವು.

ಸಿರಾಜ್ ವಿಕೆಟ್ ಬೇಟೆಯಲ್ಲಿ ಮೊದಲ ಇನ್ನಿಂಗ್ಸ್ ಶತಕವೀರ ಮಾರ್ನಸ್ ಲಾಬುಷೇನ್, ಸ್ಟೀವನ್ ಸ್ಮಿತ್, ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಜಲ್‌ವುಡ್ ಹೆಸರುಗಳು ಸೇರಿವೆ. ಅಂತಿಮವಾಗಿ ನಗುಮುಖದಿಂದಲೇ ಪ್ರೇಕ್ಷಕರ ಮನ್ನಣೆಗೆ ಪಾತ್ರವಾದರು.

ಎಲೈಟ್ ಪಟ್ಟಿಗೆ ಸೇರಿದ ಸಿರಾಜ್:

ಗಾಬಾದಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಭಾರತೀಯ ಬೌಲರ್‌ಗಳು:
ಎರಪಳ್ಳಿ ಪ್ರಸನ್ನ: 104/6, 1968
ಬಿಷನ್ ಸಿಂಗ್ ಬೇಡಿ: 57/5, 1977
ಮದಲನ್ ಲಾಲ್: 72/5, 1977
ಜಹೀರ್ ಖಾನ್: 95/5, 2003
ಮೊಹಮ್ಮದ್ ಸಿರಾಜ್: 73/5, 2021 

ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್: 
ಮೂರು ಟೆಸ್ಟ್ ಪಂದ್ಯಗಳಲ್ಲಿ ಸಿರಾಜ್ ಗಳಿಸಿದ ಒಟ್ಟು ವಿಕೆಟ್: 13  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು