ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND Vs AUS ODI: ರಾಹುಲ್ ನಾಯಕತ್ವಕ್ಕೊಂದು ಸವಾಲು

Published 21 ಸೆಪ್ಟೆಂಬರ್ 2023, 13:44 IST
Last Updated 21 ಸೆಪ್ಟೆಂಬರ್ 2023, 13:44 IST
ಅಕ್ಷರ ಗಾತ್ರ

ಮೊಹಾಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇನ್ನೆರಡು ವಾರಗಳು ಬಾಕಿ ಉಳಿದಿವೆ. ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಭಾರತ ಮತ್ತು  ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳೂ ಅಂತಿಮ ಘಟ್ಟದ ಸಿದ್ಧತೆಗಾಗಿ ಕಣಕ್ಕಿಳಿಯಲಿವೆ.

ಉಭಯ ತಂಡಗಳು ಆಡಲಿರುವ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಶುಕ್ರವಾರ ನಡೆಯಲಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆತಿಥೇಯ ತಂಡವನ್ನು ಕನ್ನಡಿಗ ಕೆ.ಎಲ್. ರಾಹುಲ್ ಮುನ್ನಡೆಸಲಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದ ರಾಹುಲ್, ವಿಕೆಟ್‌ಕೀಪಿಂಗ್‌ನಲ್ಲಿಯೂ ಗಮನ ಸೆಳೆದಿದ್ದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ತಂಡದ ಬೆಂಚ್‌ ಶಕ್ತಿಯನ್ನು ಪರೀಕ್ಷಿಸಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಕಡೆಯ ಅವಕಾಶವಾಗಿದೆ.

ಇದರಿಂದಾಗಿ ಅವಕಾಶ ಪಡೆಯಲಿರುವ ಶ್ರೇಯಸ್ ಅಯ್ಯರ್ ಅವರು ತಮ್ಮ ಫಿಟ್‌ನೆಸ್‌ ಸಾಬೀತುಪಡಿಸಬೇಕಿದೆ. ಶಸ್ತ್ರಚಿಕಿತ್ಸೆಯ ನಂತರ ದೀರ್ಘ ಸಮಯ ವಿಶ್ರಾಂತಿಯಲ್ಲಿದ್ದ ಅವರು ಈಚೆಗೆ ಏಷ್ಯಾ ಕಪ್ ಟೂರ್ನಿಗೆ ಮರಳಿದ್ದರು. ಆದರೆ, ಮತ್ತೆ ಗಾಯದ ಸಮಸ್ಯೆ ಅನುಭವಿಸಿ ಬಹುತೇಕ ಪಂದ್ಯಗಳಲ್ಲಿ ಬೆಂಚ್‌ನಲ್ಲಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಕಣಕ್ಕಿಳಿಯಲಿದ್ದಾರೆ.

ಅವರೊಂದಿಗೆ ಸೂರ್ಯಕುಮಾರ್ ಯಾದವ್ ಅವರಿಗೂ ಲಯಕ್ಕೆ ಮರಳುವ ಸವಾಲು ಇದೆ. ಇವರಿಬ್ಬರಿಗೂ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಲು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲೇಬೇಕಾದ ಒತ್ತಡದಲ್ಲಿದ್ದಾರೆ.

ಉಳಿದಂತೆ ರಾಹುಲ್ ಅವರಿಗೆ ಹೆಚ್ಚು ಚಿಂತೆಯಿಲ್ಲ. ಬೌಲಿಂಗ್‌ನಲ್ಲಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ತಂಡಕ್ಕೆ ಮರಳಿದ್ದಾರೆ. ಅಮೋಘ ಲಯದಲ್ಲಿರುವ ಸಿರಾಜ್, ಶಮಿ, ಬೂಮ್ರಾ ಇದ್ದಾರೆ. 

ತಮ್ಮ ಮುಂಗೈ ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಈ ಸರಣಿಯನ್ನು ವೇದಿಕೆ ಮಾಡಿಕೊಂಡಿದೆ.

ಇಲ್ಲಿಗೆ ಬರುವ ಮುನ್ನ ಆಸ್ಟ್ರೇಲಿಯಾ ತಂಡವು 2–3ರಿಂದ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋತು ಬಂದಿದೆ. ಅದರಿಂದಾಗಿ ತನ್ನ ಲೋಪಗಳನ್ನು ತಿದ್ದಿಕೊಳ್ಳಲೂ ತಂಡಕ್ಕೆ ಈ ಸರಣಿ ನೆರವಾಗಲಿದೆ.

ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಮಾರ್ನಸ್ ಲಾಬುಷೇನ್ ಮತ್ತು ಮಿಚೆಲ್ ಮಾರ್ಷ್ ಅವರು ತಂಡದ ಬ್ಯಾಟಿಂಗ್‌ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ.

ಅಕ್ಟೋಬರ್ ಎಂಟರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚೆನ್ನೈನಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಈ ಸರಣಿಯಲ್ಲಿ ಗೆದ್ದು ಆತ್ಮಬಲ ವೃದ್ಧಿಸಿಕೊಳ್ಳುವ ಛಲದಲ್ಲಿವೆ.

ತಂಡಗಳು:

ಭಾರತ: ಕೆ.ಎಲ್. ರಾಹುಲ್ (ನಾಯಕ–ವಿಕೆಟ್‌ಕೀಪರ್), ರವೀಂದ್ರ ಜಡೇಜ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧಕೃಷ್ಣ, ಋತುರಾಜ್ ಗಾಯಕವಾಡ.

ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ನೇಥನ್ ಎಲಿಸ್, ಕ್ಯಾಮೆರಾನ್ ಗ್ರೀನ್, ಆ್ಯಡಂ ಜಂಪಾ, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಜೋಶ್ ಹ್ಯಾಜಲ್‌ವುಡ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಷೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವಿರ್ ಸಂಘಾ, ಮ್ಯಾಟ್ ಶಾರ್ಟ್.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಜಿಯೋ ಸಿನಿಮಾ ಹಾಗೂ ಸ್ಪೋರ್ಟ್ಸ್ 18

ಬಲಾಬಲ

ಪಂದ್ಯ –146

ಭಾರತದ ಜಯ – 54

ಆಸ್ಟ್ರೇಲಿಯಾ ಜಯ – 82

ಫಲಿತಾಂಶವಿಲ್ಲ – 10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT