ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಮ್ರಾ ಜೀವನಶ್ರೇಷ್ಠ ಸಾಧನೆ, ಭಾರತಕ್ಕೆ 10 ವಿಕೆಟ್ ಗೆಲುವು; ಪಂದ್ಯದ ಹೈಲೆಟ್ಸ್

ಅಕ್ಷರ ಗಾತ್ರ

ಲಂಡನ್: ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯ (19ಕ್ಕೆ 6 ವಿಕೆಟ್) ನೆರವಿನಿಂದ ಟೀಮ್ ಇಂಡಿಯಾ, ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಅದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.

ಮೂರನೇ ಶ್ರೇಷ್ಠ ಬೌಲಿಂಗ್ ಸಾಧನೆ:
19 ರನ್ ತೆತ್ತ ಬೂಮ್ರಾ ಆರು ವಿಕೆಟ್ ಕಿತ್ತು ಮಿಂಚಿದರು. ಇದು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ನಿಂದ ದಾಖಲಾದ ಮೂರನೇ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.

2014ರಲ್ಲಿ ಸ್ಟುವರ್ಟ್ ಬಿನ್ನಿ ನಾಲ್ಕು ರನ್ನಿಗೆ ಆರು ವಿಕೆಟ್ (ಬಾಂಗ್ಲಾದೇಶ ವಿರುದ್ಧ) ಮತ್ತು 1993ರಲ್ಲಿ ಅನಿಲ್ ಕುಂಬ್ಳೆ 12 ರನ್ (ವೆಸ್ಟ್‌ಇಂಡೀಸ್ ವಿರುದ್ಧ) ತೆತ್ತು ಆರು ವಿಕೆಟ್ ಗಳಿಸಿದ್ದರು.

ಆಂಗ್ಲರ ನಾಡಿನಲ್ಲಿ ಉತ್ತಮ ಸಾಧನೆ:
ಬೂಮ್ರಾ, ಇಂಗ್ಲೆಂಡ್ ನಾಡಿನಲ್ಲಿ ಏಕದಿನದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಭಾರತೀಯ ಬೌಲರ್ ಎನಿಸಿದ್ದಾರೆ. ಒಟ್ಟಾರೆಯಾಗಿ ಇಂಗ್ಲೆಂಡ್‌ನಲ್ಲಿ ಉತ್ತಮ ಬೌಲಿಂಗ್ ಸಾಧನೆ ಮಾಡಿದ ನಾಲ್ಕನೇ ಬೌಲರ್ ಆಗಿದ್ದಾರೆ.

10 ವಿಕೆಟ್ ಜಯ:
ಟೀಮ್ ಇಂಡಿಯಾ, ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಹಾಗೂ ಒಟ್ಟಾರೆಯಾಗಿ ಏಳನೇ ಸಲ 10 ವಿಕೆಟ್ ಅಂತರದ (ನೋಲಾಸ್) ಜಯ ಗಳಿಸಿದೆ.

ರೋಹಿತ್-ಧವನ್ ದಾಖಲೆ:
ಏಕದಿನದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 18ನೇ ಬಾರಿಗೆ ಶತಕದ ಜೊತೆಯಾಟ ಕಟ್ಟಿದ್ದಾರೆ. ಈ ಮೂಲಕ ರೋಹಿತ್-ವಿರಾಟ್ ಜೋಡಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಏಕದಿನದಲ್ಲಿ ರೋಹಿತ್-ಧವನ್ ಮೊದಲ ವಿಕೆಟ್‌ಗೆ 5,000 ರನ್‌ಗಳ ಜೊತೆಯಾಟದ ಮೈಲಿಗಲ್ಲು ಕ್ರಮಿಸಿದ್ದು, ಸಚಿನ್ ಹಾಗೂ ಗಂಗೂಲಿ ಸಾಲಿಗೆ ಸೇರಿದ್ದಾರೆ.

ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅತಿ ಹೆಚ್ಚು ಶತಕಗಳ (26) ಜೊತೆಯಾಟವನ್ನು ಹೊಂದಿದ್ದಾರೆ.

ಇಂಗ್ಲೆಂಡ್ ಕನಿಷ್ಠ ಮೊತ್ತ:
ಇಂಗ್ಲೆಂಡ್ ಕೇವಲ 110 ರನ್‌‌ಗೆ ಆಲೌಟ್ ಆಯಿತು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಎದುರು ಇಂಗ್ಲೆಂಡ್ ಗಳಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ.

ವೇಗಿಗಳ ಸಾಧನೆ:
ಏಕದಿನ ಕ್ರಿಕೆಟ್‌ನಲ್ಲಿ ಆರನೇ ಸಲ ಭಾರತೀಯ ವೇಗಿಗಳು, ಇನಿಂಗ್ಸ್‌ನ ಎಲ್ಲ 10 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಮಿ ಸಾಧನೆ:
ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಏಕದಿನದಲ್ಲಿ ವೇಗದಲ್ಲಿ 150 ವಿಕೆಟ್ ಗಳಿಸಿದ ಭಾರತೀಯ ಬೌಲರ್ (80 ಪಂದ್ಯ) ಎನಿಸಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT