ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ರಾಹುಲ್ ಸೆಂಚುರಿ, ಪಂತ್-ಕೊಹ್ಲಿ ಫಿಫ್ಟಿ; ಭಾರತ 336/6

Last Updated 26 ಮಾರ್ಚ್ 2021, 11:58 IST
ಅಕ್ಷರ ಗಾತ್ರ

ಪುಣೆ: ಕೆಎಲ್ ರಾಹುಲ್ ಭರ್ಜರಿ ಶತಕ (108) ಮತ್ತು ರಿಷಭ್ ಪಂತ್ (77) ಹಾಗೂ ನಾಯಕ ವಿರಾಟ್ ಕೊಹ್ಲಿ (66) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ನಷ್ಟಕ್ಕೆ 336 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುವಷ್ಟರಲ್ಲಿ ಕಳೆದ ಪಂದ್ಯದ ಶತಕವೀರ ಶಿಖರ್ ಧವನ್ (4) ವಿಕೆಟ್ ನಷ್ಟವಾಗಿತ್ತು.

ರೋಹಿತ್ ಶರ್ಮಾ ಐದು ಬೌಂಡರಿಗಳ ನೆರವಿನಿಂದ ಎಸೆತಕ್ಕೊಂದರಂತೆ 25 ರನ್ ಗಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದರು.

ಗಾಯಾಳು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ರಾಹುಲ್, ನಾಯಕನಿಗೆ ಉತ್ತಮ ಸಾಥ್ ನೀಡಿದರು.

ಇವರಿಬ್ಬರು ಮೂರನೇ ವಿಕೆಟ್‌ಗೆ 121 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಸತತ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಸಾಧನೆ ಮಾಡಿದ ವಿರಾಟ್ 79 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು.

ವಿರಾಟ್ ಪತನದ ಬಳಿಕ ಕ್ರೀಸಿಗಿಳಿದ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಪಂದ್ಯದ ಗತಿಯನ್ನು ಬದಲಾಯಿಸಿದರು. ರಾಹುಲ್ ಹಾಗೂ ಪಂತ್ ಜೋಡಿ ಆಂಗ್ಲರ ಪಡೆಯ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು.

ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಟೀಕೆಗಳಿಗೆ ತಕ್ಕ ಉತ್ತರ ನೀಡಿದ ರಾಹುಲ್ ಮನಮೋಹಕ ಶತಕ ಸಾಧನೆ ಮಾಡಿದರು. ಅತ್ತ ಪಂತ್ 28 ಎಸೆತಗಳಲ್ಲಿ ಬಿರುಸಿನ ಅರ್ಧಶತಕದ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡರು.

114 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 106 ರನ್ ಗಳಿಸಿದರು. ಅಲ್ಲದೆ ಪಂತ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ತಂಡವನ್ನು 300ರ ಗಡಿ ದಾಟಿಸಲು ನೆರವಾದರು. ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಕೂಡಾ ಕೈಜೋಡಿಸಿದರು.

ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 336 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 40 ಎಸೆತಗಳನ್ನು ಎದುರಿಸಿದ ಪಂತ್ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು.

ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 35 ರನ್ ಗಳಿಸಿದರು. ಪಾಂಡ್ಯ ಇನ್ನಿಂಗ್ಸ್‌ನಲ್ಲೂ ನಾಲ್ಕು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸೇರಿದ್ದವು. ಇನ್ನುಳಿದಂತೆ ಕೃಣಾಲ್ ಪಾಂಡ್ಯ 9 ಎಸೆತಗಳಲ್ಲಿ ಬೌಂಡರಿ ನೆರವಿನಿಂದ 12 ರನ್ ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT