ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್): 500ನೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಸ್ಮರಣೀಯ ಸಾಧನೆ ಮಾಡಿದ್ದಾರೆ.
ಅತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕಿಂಗ್ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ.
ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ದಾಖಲೆಯನ್ನು ಮುರಿದಿದ್ದಾರೆ.
500 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ (559 ಇನಿಂಗ್ಸ್) ಕೊಹ್ಲಿ 53.67ರ ಸರಾಸರಿಯಲ್ಲಿ ಒಟ್ಟು 25,548 ರನ್ ಪೇರಿಸಿದ್ದಾರೆ. 75 ಶತಕ ಹಾಗೂ 132 ಅರ್ಧಶತಕಗಳನ್ನು ಒಳಗೊಂಡಿವೆ.
ಮತ್ತೊಂದೆಡೆ ಕಾಲಿಸ್ 519 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 25,534 ರನ್ (62 ಶತಕ, 149 ಅರ್ಧಶತಕ) ಗಳಿಸಿದ್ದರು.
ಈ ಪಟ್ಟಿಯಲ್ಲಿ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 664 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ (100 ಶತಕ, 164 ಅರ್ಧಶತಕ) ಒಟ್ಟು 34,357 ರನ್ ಪೇರಿಸಿದ್ದರು.
ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 161 ಎಸೆತಗಳಲ್ಲಿ 87 ರನ್ ಗಳಿಸಿ (8 ಬೌಂಡರಿ) ಔಟಾಗದೆ ಉಳಿದಿದ್ದು, 76ನೇ ಶತಕದತ್ತ ದಾಪುಗಾಲು ಇಟ್ಟಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರ ಪಟ್ಟಿ:
ಸಚಿನ್ ತೆಂಡೂಲ್ಕರ್: 34,357
ಕುಮಾರ ಸಂಗಕ್ಕರ: 28,016
ರಿಕಿ ಪಾಂಟಿಂಗ್: 27,483
ಮಹೇಲಾ ಜಯವರ್ಧನೆ: 25,957
ವಿರಾಟ್ ಕೊಹ್ಲಿ: 25,548*
ಜಾಕ್ ಕಾಲಿಸ್: 25,534
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.