ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ನೇ ಟೆಸ್ಟ್ ಪಂದ್ಯದಲ್ಲಿ ಸೋತ ಇಂಗ್ಲೆಂಡ್; ಭಾರತ ಮಹಿಳೆಯರಿಗೆ ವಿಶ್ವ ದಾಖಲೆಯ ಜಯ

Published 16 ಡಿಸೆಂಬರ್ 2023, 6:49 IST
Last Updated 16 ಡಿಸೆಂಬರ್ 2023, 6:49 IST
ಅಕ್ಷರ ಗಾತ್ರ

ಮುಂಬೈ: ನೂರನೇ ಟೆಸ್ಟ್ ಪಂದ್ಯವಾಡಿದ ಏಕೈಕ ಮಹಿಳಾ ಕ್ರಿಕೆಟ್‌ ತಂಡ ಎನಿಸಿದ ಇಂಗ್ಲೆಂಡ್‌ ಪಡೆ, ಭಾರತ ತಂಡದೆದುರು ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿ 347 ರನ್‌ ಅಂತರದ ಹೀನಾಯ ಸೋಲು ಅನುಭವಿಸಿತು.

ಇಲ್ಲಿನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ವರು ಆಟಗಾರ್ತಿಯರು ಗಳಿಸಿದ ಅಮೋಘ ಅರ್ಧಶತಕಗಳ ಬಲದಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 428 ರನ್‌ ಗಳಿಸಿ ಆಲೌಟ್‌ ಆಯಿತು. ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌, 136 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.

ದೀಪ್ತಿ ಶರ್ಮಾ 5 ವಿಕೆಟ್‌ ಗೊಂಚಲು ಸಾಧನೆ ಮಾಡಿದರೆ, ಸ್ನೇಹಾ ರಾಣಾ ಎರಡು ಮತ್ತು ಪೂಜಾ ವಸ್ತ್ರಾಕರ್‌, ರೇಣುಕಾ ಸಿಂಗ್‌ ತಲಾ ಒಂದು ವಿಕೆಟ್‌ ಹಂಚಿಕೊಂಡರು.

292 ರನ್‌ಗಳ ಭಾರಿ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ, 6 ವಿಕೆಟ್‌ಗೆ 186 ರನ್‌ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. ಅದರೊಂದಿಗೆ ಪ್ರವಾಸಿ ಪಡೆಗೆ 479 ರನ್‌ಗಳ ಬೃಹತ್‌ ಗುರಿ ನೀಡಿತು.

ಕಠಿಣ ಗುರಿ ಎದುರು ಮೂರನೇ ದಿನ ಬ್ಯಾಟಿಂಗ್‌ ಆರಂಭಿಸಿದ ಆಂಗ್ಲರು, ಆತಿಥೇಯ ಬೌಲರ್‌ಗಳೆದುರು ಯಾವ ಹಂತದಲ್ಲೂ ದಿಟ್ಟ ಆಟವಾಡಲಿಲ್ಲ. ನಿರಂತರವಾಗಿ ವಿಕೆಟ್‌ ಕಳೆದುಕೊಂಡು ಕೇವಲ 131 ರನ್‌ ಆಗುವಷ್ಟರಲ್ಲೇ ಕುಸಿದು ಸೋಲೊಪ್ಪಿಕೊಂಡರು.

ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಮತ್ತೆ ಕಾಟ ಕೊಟ್ಟ ದೀಪ್ತಿ 4 ವಿಕೆಟ್‌ ಜೇಬಿಗಿಳಿಸಿಕೊಂಡರು. ಅವರಿಗೆ ಉತ್ತಮ ಸಹಕಾರ ನೀಡಿದ ಪೂಜಾ ಮೂರು ವಿಕೆಟ್‌ ಪಡೆದರು. ಇನ್ನು ಮೂರು ವಿಕೆಟ್‌ಗಳನ್ನು ರಾಜೇಶ್ವರಿ ಗಾಯಕವಾಡ್‌ (2) ಮತ್ತು ರೇಣುಕಾ ಸಿಂಗ್‌ (1) ಉರುಳಿಸಿದರು.

ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ ಹಾಗೂ ಅರ್ಧಶತಕ ಸಹಿತ 87 ರನ್ ಗಳಿಸಿದ ದೀಪ್ತಿ, ಪಂದ್ಯ ಶ್ರೇಷ್ಠ ಆಟಗಾರ್ತಿ ಎನಿಸಿದರು.

ಭಾರತಕ್ಕೆ ವಿಶ್ವ ದಾಖಲೆಯ ಜಯ
ಭಾರತ ಆಟಗಾರ್ತಿಯರು ಸಾಧಿಸಿದ ಈ ಜಯ, ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ ಅಂತರದಲ್ಲಿ ದಾಖಲಾದ ವಿಶ್ವ ದಾಖಲೆಯ ಗೆಲುವು ಎನಿಸಿತು.

ಶ್ರೀಲಂಕಾ ಮಹಿಳೆಯರು 1998ರಲ್ಲಿ ಪಾಕಿಸ್ತಾನ ವಿರುದ್ಧ 309 ರನ್‌ ಅಂತರದಿಂದ ಗೆಲುವು ಸಾಧಿಸಿದ್ದು, ಇದುವರೆಗೆ ದಾಖಲೆಯಾಗಿತ್ತು.

ಹೆಚ್ಚು ರನ್‌ ಅಂತರದಲ್ಲಿ ಗೆದ್ದ ಐದು ಮಹಿಳಾ ತಂಡಗಳು
ಭಾರತ:
2023ರಲ್ಲಿ ಇಂಗ್ಲೆಂಡ್‌ ವಿರುದ್ಧ 347 ರನ್‌ ಜಯ
ಶ್ರೀಲಂಕಾ:
1998ರಲ್ಲಿ ಪಾಕಿಸ್ತಾನ ವಿರುದ್ಧ 309 ರನ್‌ ಜಯ
ನ್ಯೂಜಿಲೆಂಡ್‌: 1972ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 188 ರನ್‌ ಜಯ
ಆಸ್ಟ್ರೇಲಿಯಾ: 1949ರಲ್ಲಿ ಇಂಗ್ಲೆಂಡ್‌ ವಿರುದ್ಧ 186 ರನ್‌ ಜಯ
ಇಂಗ್ಲೆಂಡ್‌: 1949ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 185 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT