ಇನ್ನಿಂಗ್ಸ್‌ನಲ್ಲಿ ದಾಖಲಾದ ಒಂದೇ ವೈಡ್
ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಹೆಚ್ಚು ಇತರೆ ರನ್‌ಗಳನ್ನು ಬಿಟ್ಟುಕೊಡದಿರುವುದು ವಿಶೇಷ. ಒಂದು ವೈಡ್ ಮಾತ್ರ ದಾಖಲಾಯಿತು. ಅದನ್ನು ಆರ್ಷದೀಪ್ ಸಿಂಗ್ ಹಾಕಿದ್ದರು.
ಬೌಲಿಂಗ್ ಪಿಚ್: ಬೆಂಗಳೂರಿನ ಪಿಚ್ ಯಾವಾಗಲೂ ರನ್‌ಗಳಿಕೆಗೆ ಹೆಚ್ಚು ನೆರವು ನೀಡುವುದು ವಾಡಿಕೆ. ಈಚೆಗೆ ಇಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯಗಳೇ ಈ ಮಾತಿಗೆ ಉತ್ತಮ ಉದಾಹರಣೆ. ಆದರೆ, ಈ ಪಂದ್ಯದಲ್ಲಿ ಬೌಲರ್‌ಗಳೇ ಹೆಚ್ಚು ವಿಜೃಂಭಿಸಿದರು.
‘ಪಂದ್ಯಕ್ಕಿಂತ ಮೊದಲು ಸಣ್ಣದಾಗಿ ಮಳೆ ಬಂದಿತ್ತು. ವಾತಾವರಣವೂ ತಂಪಾಗಿತ್ತು. ಆದ್ದರಿಂದ ಪಿಚ್ ಒಂದಿಷ್ಟು ಜಿಗುಟುತನದಿಂದ ಕೂಡಿತ್ತು. ಮೊದಲ ಮೂರ್ನಾಲ್ಕು ಓವರ್‌ಗಳಲ್ಲಿ ರನ್‌ಗಳು ಸರಾಗವಾಗಿ ಬಂದರೂ ನಂತರ ಬೌಲರ್‌ಗಳಿಗೆ ಮೇಲುಗೈ ಲಭಿಸಿತು’ ಎಂದು ಆಸ್ಟ್ರೇಲಿಯಾ ತಂಡದ ಬೆನ್ ಮೆಕ್‌ಡರ್ಮಾಟ್ ಪಂದ್ಯದ ನಂತರ ಹೇಳಿದರು.