ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಜೆಂಡ್ಸ್ ಕ್ರಿಕೆಟ್‌: ಫೈನಲ್‌ಗೆ ಇಂಡಿಯಾ ಕ್ಯಾಪಿಟಲ್ಸ್

ಲೆಜೆಂಡ್ಸ್ ಕ್ರಿಕೆಟ್‌: ರಾಸ್‌ ಟೇಲರ್, ಆ್ಯಶ್ಲೆ ನರ್ಸ್ ಅಮೋಘ ಬ್ಯಾಟಿಂಗ್
Last Updated 3 ಅಕ್ಟೋಬರ್ 2022, 13:24 IST
ಅಕ್ಷರ ಗಾತ್ರ

ಜೋಧ್‌ಪುರ: ರಾಸ್‌ ಟೇಲರ್ ಮತ್ತು ಆ್ಯಶ್ಲೆ ನರ್ಸ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಡಿಯಾ ಕ್ಯಾಪಿಟಲ್ಸ್ ತಂಡವು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿತು.

ಭಾನುವಾರ ಇಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ವಿಕೆಟ್‌ಗಳಿಂದ ಭಿಲವಾಡಾ ಕಿಂಗ್ಸ್ ತಂಡವನ್ನು ಪರಾಭವಗೊಳಿಸಿತು.

ಟಾಸ್‌ ಗೆದ್ದ ಭಿಲವಾಡಾ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಂಡರು. ವಿಲಿಯಮ್ ಪೋಟರ್‌ಫೀಲ್ಡ್‌ (59, 37ಎ, 4X7, 6X3) ಮತ್ತು ಶೇನ್ ವಾಟ್ಸನ್‌ (65, 39ಎ, 4X10, 6X2) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 116 ರನ್ ಪೇರಿಸಿದರು. ಯೂಸುಫ್ ಪಠಾಣ್‌ (48, 24ಎ, 4X3, 6X4) ಮತ್ತು ರಾಜೇಶ್ ಬಿಷ್ಣೊಯಿ (36, 11ಎ, 4X5, 6X2) ಕೂಡ ತಂಡಕ್ಕೆ ಕೊಡುಗೆ ನೀಡಿದರು. ತಂಡವು ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 226 ರನ್ ಗಳಿಸಿತು.

ಬೃಹತ್ ಗುರಿ ಬೆನ್ನತ್ತಿದ ಕ್ಯಾಪಿಟಲ್ಸ್ ಆರಂಭಿಕ ಆಘಾತ ಅನುಭವಿಸಿದರೂ ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಸೇರಿತು. ರಾಸ್‌ ಟೇಲರ್ (84, 39ಎ, 4X9, 6X5) ಮತ್ತು ಆ್ಯಶ್ಲೆ ನರ್ಸ್ (60, 28ಎ, 4X5, 6X4) ಮಧ್ಯಮ ಕ್ರಮಾಂಕದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಲಿಯಾಮ್ ಫ್ಲಂಕೆಟ್‌ (20, 9ಎ, 4X1, 6X2) ಕೊನೆಯಲ್ಲಿ ಅಬ್ಬರಿಸಿದ್ದು ಫಲ ನೀಡಿತು.

ಸಂಕ್ಷಿಪ್ತ ಸ್ಕೋರು: ಭಿಲವಾಡಾ ಕಿಂಗ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 226 (ವಿಲಿಯಮ್‌ ಪೋಟರ್‌ಫೀಲ್ಡ್‌ 59, ಶೇನ್ ವಾಟ್ಸನ್‌ 65, ಯೂಸುಫ್ ಪಠಾಣ್‌ 48, ರಾಜೇಶ್ ಬಿಷ್ಣೊಯಿ 36; ಮಿಚೆಲ್ ಜಾನ್ಸನ್‌ 51ಕ್ಕೆ 2). ಇಂಡಿಯಾ ಕ್ಯಾಪಿಟಲ್ಸ್: 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 231 (ಡ್ವೇನ್ ಸ್ಮಿತ್‌ 24, ರಾಸ್ ಟೇಲರ್ 84, ಆ್ಯಶ್ಲೆ ನರ್ಸ್ ಔಟಾಗದೆ 60, ಲಿಯಾಮ್ ಫ್ಲಂಕೆಟ್‌ ಔಟಾಗದೆ 20; ಮಾಂಟಿ ಪನೇಸರ್ 26ಕ್ಕೆ 1, ಶ್ರೀಶಾಂತ್‌ 44ಕ್ಕೆ 1, ಫಿಡೆಲ್ ಎಡ್ವರ್ಡ್ಸ್ 54ಕ್ಕೆ 2). ಫಲಿತಾಂಶ: ಇಂಡಿಯಾ ಕ್ಯಾಪಿಟಲ್ಸ್‌ಗೆ 4 ವಿಕೆಟ್‌ಗಳ ಜಯ

ಯೂಸುಫ್‌–ಜಾನ್ಸನ್‌ ಮಾತಿನ ಚಕಮಕಿ: ಪಂದ್ಯದ 19ನೇ ಓವರ್‌ನಲ್ಲಿ ಭಿಲವಾಡಾ ಕಿಂಗ್ಸ್‌ ತಂಡದ ಯೂಸುಫ್ ಪಠಾಣ್‌ ಮತ್ತು ಇಂಡಿಯಾ ಕ್ಯಾಪಿಟಲ್ಸ್‌ನ ಮಿಚೆಲ್ ಜಾನ್ಸನ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಭಿಲಾವಾಡಾ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಯೂಸುಫ್ ಅವರು ಜಾನ್ಸನ್ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಾಗ ಈ ಪ್ರಸಂಗ ನಡೆಯಿತು. ಜಾನ್ಸನ್ ಅವರ ಇದಕ್ಕೂ ಮೊದಲಿನ ಓವರ್‌ನಲ್ಲಿ ಯೂಸೂಫ್ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದ್ದರು. ಇಬ್ಬರ ಮಧ್ಯೆ ತಳ್ಳಾಟ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ವೇಳೆ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT