ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ಶನಿವಾರ, ಮಾರ್ಚ್ 23, 2019
24 °C
ಏಕದಿನ ಸರಣಿಯ ಫೈನಲ್‌ ಪಂದ್ಯ: ರೋಹಿತ್‌ ಶರ್ಮಾ ಏಕಾಂಗಿ ಹೋರಾಟಕ್ಕೆ ಸಿಗದ ಫಲ

ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

Published:
Updated:

ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಅವರ ತವರಿನಲ್ಲೇ ಅಂತಿಮ ಪಂದ್ಯವನ್ನು ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತು. ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಆ್ಯರನ್ ಫಿಂಚ್ ಬಳಗ 35 ರನ್‌ಗಳಿಂದ ಆತಿಥೇಯರನ್ನು ಮಣಿಸಿತು.

ಎದುರಾಳಿಗಳು ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ, ಆರನೇ ಕ್ರಮಾಂಕದ ಕೇದಾರ್ ಜಾಧವ್ ಮತ್ತು ಎಂಟನೇ ಕ್ರಮಾಂಕದ ಭುವನೇಶ್ವರ್ ಕುಮಾರ್ ಮಾತ್ರ ಪ್ರತಿರೋಧ ತೋರಿದರು. ನಾಯಕ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ನಿರಾಸೆ ಅನುಭವಿಸಿದರು.

ರೋಹಿತ್ ಶರ್ಮಾ ಏಕಾಂಗಿ ಹೋರಾಟ: ಸರಣಿಯ ಒಂದು ಪಂದ್ಯದಲ್ಲಿ ಏಕೈಕ ಶತಕ ಸಿಡಿಸಿದರೂ ಉಳಿದ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಶಿಖರ್ ಧವನ್‌ ಬುಧವಾರವೂ ನೀರಸ ಬ್ಯಾಟಿಂಗ್ ಮಾಡಿದರು. 15 ಎಸೆತಗಳಲ್ಲಿ 12 ರನ್ ಗಳಿಸಿದ ಅವರು ‍ಪ್ಯಾಟ್ ಕಮಿನ್ಸ್‌ಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ ಕೇವಲ 15 ರನ್‌ ಆಗಿತ್ತು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ (56; 89 ಎಸೆತ, 4 ಬೌಂಡರಿ) ಮತ್ತು ವಿರಾಟ್ ಕೊಹ್ಲಿ ಭಾರತ ಪಾಳಯದಲ್ಲಿ ಭರವಸೆ ಮೂಡಿಸಿದರು. ಆದರೆ ಈ ಜೋಡಿಗೆ 53 ರನ್‌ಗಳ ಜೊತೆಯಾಟವಾಡಲಷ್ಟೇ ಸಾಧ್ಯವಾಯಿತು.ಕೊಹ್ಲಿ ಮರಳಿದ ನಂತರವೂ ರೋಹಿತ್ ಪ್ರಯತ್ನ ಮುಂದುವರಿಸಿದರು. ಆದರೆ ಅರ್ಧಶತಕ ಗಳಿಸಿದ ನಂತರ ಅವರೂ ಕ್ರೀಸ್ ತೊರೆದರು. ನಂತರ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. ಕೇದಾರ್ ಜಾಧವ್ ಮತ್ತು ಭುವನೇಶ್ವರ್ ಕುಮಾರ್‌ ನಡೆಸಿದ ಪ್ರಯತ್ನಕ್ಕೂ ಫಲ ಸಿಗಲಿಲ್ಲ.

ಕ್ವಾಜಾ ಶತಕದ ಬಲ: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡಕ್ಕೆ ಉಸ್ಮಾನ್ ಕ್ವಾಜಾ ಮತ್ತು ನಾಯಕ ಆ್ಯರನ್ ಫಿಂಚ್‌ ಉತ್ತಮ ತಳಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 76 ರನ್‌ ಗಳಿಸಿತು. ಉಸ್ಮಾನ್ ಕ್ವಾಜಾ ಸರಣಿಯಲ್ಲಿ ಎರಡನೇ ಶತಕ ಗಳಿಸಿದರೆ, ಫಿಂಚ್‌ ತಾಳ್ಮೆಯ 27 (43 ಎಸೆತ, 4 ಬೌಂಡರಿ) ರನ್‌ ಗಳಿಸಿದರು.

ನಾಯಕ ಮರಳಿದ ನಂತರ ಕ್ವಾಜಾ ಜೊತೆಗೂಡಿದ ಪೀಟರ್‌ ಹ್ಯಾಂಡ್ಸ್‌ಕಂಬ್‌ (52; 60ಎ, 4 ಬೌಂ) ಎರಡನೇ ವಿಕೆಟ್‌ಗೆ 99 ರನ್ ಸೇರಿಸಿದರು. ಸರಣಿಯ ಈ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದ ಕ್ವಾಜಾ ಈ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದರು. ಮೊದಲ ಪಂದ್ಯದಲ್ಲಿ 50, ಎರಡನೇ ಪಂದ್ಯದಲ್ಲಿ 38, ಮೂರನೇ ಪಂದ್ಯದಲ್ಲಿ 104 ಮತ್ತು ಕಳೆದ ಪಂದ್ಯದಲ್ಲಿ 91 ರನ್‌ ಗಳಿಸಿದ್ದ ಎಡಗೈ ಆಟಗಾರ ಇಲ್ಲಿ ಮೋಹಕ ಹೊಡೆತಗಳ ಮೂಲಕ ರಂಜಿಸಿದರು. ಹೀಗಾಗಿ ಒಂದು ಹಂತದಲ್ಲಿ ತಂಡದ ಮೊತ್ತ 350 ದಾಟುವ ನಿರೀಕ್ಷೆ ಮೂಡಿತ್ತು. ಈ ಸಂದರ್ಭದಲ್ಲಿ ಭಾರತದ ಬೌಲರ್‌ಗಳು ತಿರುಗೇಟು ನೀಡಿದರು. ಕ್ವಾಜಾ ಅವರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್‌ಗೆ ಕಳುಹಿಸಿದರೆ, ಹ್ಯಾಂಡ್ಸ್‌ಕಂಬ್‌, ಮೊಹಮ್ಮದ್ ಶಮಿಗೆ ಬಲಿಯಾದರು.

ಅಪಾಯಕಾರಿ ಗ್ಲೆನ್ ಮ್ಯಾಕ್ಸ್‌ವೆಲ್‌, ಜಡೇಜ ಅವರ ಸ್ಪಿನ್ ಮೋಡಿಗೆ ಬಲಿಯಾದರು. 46ನೇ ಓವರ್‌ನಲ್ಲಿ ತಂಡದ ಮೊತ್ತ 229 ಆಗಿತ್ತು. ಈ ಹಂತದಲ್ಲಿ ಜೇ ರಿಚರ್ಡ್ಸನ್‌ 21 ಎಸೆತಗಳಲ್ಲಿ 29 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !