ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕಿಂತ ಆಸ್ಟ್ರೇಲಿಯಾ ಬೌಲಿಂಗ್ ವಿಭಾಗ ಪ್ರಬಲ: ರಿಕಿ ಪಾಂಟಿಂಗ್

Last Updated 3 ಡಿಸೆಂಬರ್ 2019, 6:07 IST
ಅಕ್ಷರ ಗಾತ್ರ

ನವದೆಹಲಿ:ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಭಾರತ ತಂಡದ ಸದ್ಯದ ಬೌಲಿಂಗ್‌ ವಿಭಾಗಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಬೌಲಿಂಗ್‌ ಪ್ರಬಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ವಿಶ್ವ ಟೆಸ್ಟ್‌ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಭಾರತವು ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ವಿರಾಟ್‌ ಕೊಹ್ಲಿ ಪಡೆಯ ವೇಗಿಗಳು ಹಾಗೂ ಸ್ಪಿನ್ನರ್‌ಗಳ ಪಾತ್ರ ದೊಡ್ಡದು. ಆದರೆ, ಆಸ್ಟ್ರೇಲಿಯಾ ಬೌಲರ್‌ಗಳು ವಿದೇಶಿ ಪಿಚ್‌ಗಳಲ್ಲಿಯೂ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಬಲ್ಲರು ಎಂಬುದು ಪಾಂಟಿಂಗ್‌ ಅನಿಸಿಕೆ.

Cricket.com.auಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾಂಟಿಂಗ್‌,‘ನಾನು ನಮ್ಮ ತಂಡವೇ ಉತ್ತಮ ಎನ್ನುತ್ತೇನೆ. ಭಾರತದ ಬೌಲಿಂಗ್‌ ವಿಭಾಗ ಅದ್ಭುತವಾಗಿದೆ.ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಅಮೋಘವಾಗಿ ಆಡುತ್ತಿದ್ದಾರೆ. ಹಾಗೆಯೇ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಅವರೂ ಉತ್ತಮ ವೇಗಿಗಳು.ರವಿಚಂದ್ರನ್‌ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡ ಅಲ್ಲಿ (ಭಾರತದಲ್ಲಿ) ಉತ್ತಮವಾಗಿ ದಾಳಿ ಮಾಡಬಲ್ಲರು’

‘ಆದರೆ, ಸ್ಪಿನ್ನರ್‌ಗಳು ಆಸ್ಟ್ರೇಲಿಯಾದಲ್ಲಿ ಹೆಚ್ಚು ಪರದಾಡುತ್ತಾರೆ. ನಾಥನ್‌ ಲಿಯೊನ್‌ ಭಾರತೀಯ ಸ್ಪಿನ್ನರ್‌ಗಳಿಗಿಂತ ಉತ್ತಮ ದಾಖಲೆ ಹೊಂದಿದ್ದಾರೆ. ನಮ್ಮವಿಭಾಗದಲ್ಲಿ ವೈವಿಧ್ಯತೆ ಇದೆ. ಪರಿಣಾಮಕಾರಿಯಾಗಿ ಬೌಲ್‌ ಮಾಡುವ ವಿಶೇಷ ಸಾಮರ್ಥ್ಯದ ಎಡಗೈ ವೇಗಿ ಮಿಚೇಲ್‌ ಸ್ಟಾರ್ಕ್‌ ಇದ್ದಾರೆ. ಭಾರತಕ್ಕಿಂತ ಭಿನ್ನ ಎನಿಸುವ ಇಂತಹ ಮತ್ತಷ್ಟು ಅಂಶಗಳನ್ನು ಗಮನಿಸಿದ್ದೇನೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಟಿಮ್‌ ಪೈನೆ ನೇತೃತ್ವದ ಆಸಿಸ್‌ಗೆ 120 ಅಂಕಗಳು ಲಭಿಸಿದೆ.ಇದಕ್ಕೂ ಮೊದಲು ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಎರಡು ಗೆಲುವು ಸಾಧಿಸಿ 56 ಅಂಕ ಸಂಪಾದಿಸಿತ್ತು.

ಹೀಗಾಗಿಸದ್ಯ ಒಟ್ಟು 176 ಅಂಕ ಹೊಂದಿರುವ ಆಸಿಸ್‌ ಟೆಸ್ಟ್‌ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಆಡಿರುವ ಎಲ್ಲ (7) ಪಂದ್ಯಗಳಲ್ಲೂ ಗೆದ್ದಿರುವ ಭಾರತ 360 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT