ಗುರುವಾರ , ಫೆಬ್ರವರಿ 27, 2020
19 °C

U19 World Cup ಕ್ವಾರ್ಟರ್‌ಫೈನಲ್‌ | ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಾಟ್ಚೆಫ್‌ಸ್ಟ್ರೋಮ್ (ದಕ್ಷಿಣ ಆಫ್ರಿಕಾ): ಭಾರತ ನೀಡಿರುವ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ, 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಸೂಪರ್‌ ಲೀಗ್‌ ಮೊದಲ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ 233 ರನ್‌ ಕಲೆಹಾಕಿತ್ತು. ಈ ಸುಲಭ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಕಾರ್ತಿಕ್‌ ತ್ಯಾಗಿ ಎಸೆದ ಮೊದಲ ಓವರ್‌ನಲ್ಲೇ ಮೂರು ವಿಕೆಟ್‌ ಕಳೆದುಕೊಂಡಿತು.

ಸ್ಯಾಮ್‌ ಫಾನ್ನಿಂಗ್ ಜೊತೆ ಇನಿಂಗ್ಸ್‌ ಆರಂಭಿಸಿದ ಜೆ.ಎಫ್‌. ಮೆಕ್‌ಗರ್ಕ್‌ ಮೊದಲ ಎಸೆತದಲ್ಲೇ ರನ್‌ ಔಟ್‌ ಆದರು. ಬಳಿಕ ಬಂದ ನಾಯಕ ಮೆಕೆಂಜಿ ಹಾರ್ವೆ ಬೌಂಡರಿ ಗಳಿಸಿ ಭರವಸೆ ಮೂಡಿಸಿದರಾದರೂ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರದ ಎಸೆತದಲ್ಲಿ ಲಾಚನ್‌ ಹೀರ್ನೆ ಸೊನ್ನೆ ಸುತ್ತಿದರು.

ಹೀಗಾಗಿ ಆಸಿಸ್‌ ಮೊದಲ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 5 ರನ್ ಮಾತ್ರ. ಎರಡನೇ ಓವರ್‌ನಲ್ಲಿ ರಕ್ಷಣಾತ್ಮಕವಾಗಿ ಆಡಿದ ಆಸಿಸ್‌ ಪಡೆಯನ್ನು ಮೂರನೇ ಓವರ್‌ನಲ್ಲಿ ತ್ಯಾಗಿ ಮತ್ತೆ ಕಾಡಿದರು. ಓಲಿವರ್‌ ಡೇವಿಸ್‌ ವಿಕೆಟ್‌ ಪಡೆದು ಸಂಭ್ರಮಿಸಿದರು.

ಸದ್ಯ ಫಾನ್ನಿಂಗ್‌ (8) ಮತ್ತು ಇನ್ನೂ ಖಾತೆ ತೆರೆಯದ ವಿಕೆಟ್‌ ಕೀಪರ್‌ ಪ್ಯಾಟ್ರಿಕ್‌ ರೋ ಕ್ರೀಸ್‌ನಲ್ಲಿದ್ದು, ಹಾರ್ವೆ ಪಡೆ 5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 23 ರನ್‌ ಗಳಿಸಿ ಆಡುತ್ತಿದೆ. ಕಾರ್ತಿಕ್‌ ತ್ಯಾಗಿ ಮೂರು ಓವರ್‌ಗಳಲ್ಲಿ ಎಂಟು ರನ್‌ ನೀಡಿ 3 ವಿಕೆಟ್‌ ಪಡೆದಿದ್ದಾರೆ.

ಭಾರತಕ್ಕೆ ಯಶಸ್ವಿ, ಅಥರ್ವ ಆಸರೆ
ಟಾಸ್‌ ಸೋತರು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಾಳ್ಮೆಯ ಬ್ಯಾಟಿಂಗ್‌ ನಡೆಸಿತ್ತು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 35 ರನ್‌ ಗಳಿಸಿದ್ದ ಭಾರತ ನಂತರ ಕೇವಲ 19 ರನ್‌ ಕಲೆಹಾಕುವಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ದಿವ್ಯಾಂಶ್‌ ಸಕ್ಸೇನಾ (14), ಬಳಿಕ ಬಂದ ತಿಲಕ್‌ ವರ್ಮಾ (2) ಹಾಗೂ ನಾಯಕ ಪ್ರಿಯಂ ಗರ್ಗ್‌ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಭಾರತ 150 ರನ್‌ ಕಲೆಹಾಕುವುದೇ ಅನುಮಾನವಿತ್ತು.

ಆದರೆ, ಜೈಸ್ವಾಲ್‌, ರವಿ ಬಿಷ್ಣೋಯಿ ಹಾಗೂ ಅಥರ್ವ ಅಂಕೋಲೆಕರ್‌ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವಾದರು.

ಜೈಸ್ವಾಲ್‌ 82 ಎಸೆತಗಳಲ್ಲಿ 6 ಬೌಂಡರಿ ಎರಡು ಸಿಕ್ಸರ್ ಸಹಿತ 62 ರನ್‌ ಗಳಿಸಿದರು. ರವಿ 30 ರನ್‌ ಕಲೆಹಾಕಿದರೆ, ಕೊನೆಯಲ್ಲಿ ಮಿಂಚಿನ ಆಟವಾಡಿದ ಅಥರ್ವ 54 ಎಸೆತಗಳಲ್ಲಿ 55 ರನ್ ಬಾರಿಸಿದರು. ಹೀಗಾಗಿ ಸುಲಭ ತುತ್ತಾಗುವ ಆತಂಕದಿಂದ ಭಾರತ ಅಲ್ಪದರಲ್ಲೇ ಪಾರಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು