ಭಾನುವಾರ, ಜನವರಿ 19, 2020
23 °C

ತವರಿನ ಹುಲಿಗಳಿಗೆ ಮನೆಯಂಗಳದಲ್ಲೇ ಆಘಾತ: ಹತ್ತು ವಿಕೆಟ್‌ಗಳ ಜಯ ಸಾಧಿಸಿದ ಆಸಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದ ಆ್ಯರನ್‌ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌, ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ತಂಡಕ್ಕೆ ಹತ್ತು ವಿಕೆಟ್‌ಗಳ ಅಧಿಕಾರಯುತ ಗೆಲುವು ತಂದುಕೊಟ್ಟರು.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್‌ ಪಡೆ 255 ರನ್ ಗಳಿಸಿ ಆಲೌಟ್‌ ಆಗಿತ್ತು. ಮೂವರು (ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್) ಆರಂಭಿಕರಿಗೂ ಅವಕಾಶ ನೀಡಿದ್ದ ಕೊಹ್ಲಿ, ಎಂದಿನ ಮೂರನೇ ಕ್ರಮಾಂಕದಿಂದ ಹಿಂಬಡ್ತಿ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಆಡಿದರು. ಆದರೆ, ಈ ಯೋಜನೆ ಫಲ ನೀಡಲಿಲ್ಲ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಲ್ಲ. ತಂಡದ ಮೊತ್ತ 13 ರನ್‌ ಆಗಿದ್ದಾಗ ರೋಹಿತ್‌ ಶರ್ಮಾ (10) ವಿಕೆಟ್‌ ಒಪ್ಪಿಸಿದರು. ಬಳಿಕ ಜೊತೆಯಾದ ಶಿಖರ್‌ ಧವನ್‌ (74) ಹಾಗೂ ಕನ್ನಡಿಗ ಕೆ.ಎಲ್‌.ರಾಹುಲ್‌ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 136 ಎಸೆತಗಳಲ್ಲಿ 121 ರನ್‌ ಕೂಡಿಸಿದರು.

ಮೂರನೇ ಕ್ರಮಾಂಕದಲ್ಲಿ ಆಡಿದ ಕೆ.ಎಲ್‌ ರಾಹುಲ್‌ 47 ರನ್‌ ಗಳಿಸಿದರಾದರೂ, ಕೊಹ್ಲಿ ಕೇವಲ 16 ರನ್‌ ಗಳಿಸಿ ಔಟಾದರು. ನಾಲ್ಕು ರನ್‌ ಗಳಿಸಿದ್ದ ಶ್ರೇಯಸ್‌ ಅಯ್ಯರ್‌ ನಾಯಕನನ್ನು ಹಿಂಬಾಲಿಸಿದರು. ಹೀಗಾಗಿ ರನ್‌ ಗಳಿಕೆ ವೇಗಕ್ಕೆ ಪೆಟ್ಟು ಬಿದ್ದಿತು. ಅಂತಿಮವಾಗಿ ಭಾರತ 49.1 ಓವರ್‌ಗಳಲ್ಲಿ 255 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತ ಪ್ರವಾಸಿ ಪಡೆಗೆ ಸವಾಲೇ ಆಗಲಿಲ್ಲ. ಒಂದೂ ವಿಕೆಟ್‌ ಕಳೆದುಕೊಳ್ಳದೆ ಗುರಿ ಮಟ್ಟಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ಶತಕ ಸಿಡಿಸಿ ಮಿಂಚಿದರು. 112 ಎಸೆತಗಳನ್ನು ಎದುರಿಸಿದ ವಾರ್ನರ್‌ ಮೂರು ಸಿಕ್ಸರ್ ಹಾಗು 17 ಬೌಂಡರಿ ಚಚ್ಚಿದರೆ, ನಾಯಕ ಆ್ಯರನ್‌ ಫಿಂಚ್‌ 114 ಎಸೆತಗಳಲ್ಲಿ 110 ರನ್ ಗಳಿಸಿದರು.

ಹೀಗಾಗಿ ಇನ್ನು 12.2 ಓವರ್ ಬಾಕಿ ಇರುವಂತೆಯೇ 258 ರನ್‌ ಕಲೆಹಾಕಿದ ಆಸ್ಟ್ರೇಲಿಯಾ ಭಾರತಕ್ಕೆ ತವರಿನಂಗಳದಲ್ಲಿ ಪೆಟ್ಟು ನೀಡಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು