ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ | ವೇಗವಾಗಿ ನೂರು ವಿಕೆಟ್: ಹರ್ಭಜನ್ ದಾಖಲೆ ಮುರಿದ ಕುಲದೀಪ್

Last Updated 18 ಜನವರಿ 2020, 9:49 IST
ಅಕ್ಷರ ಗಾತ್ರ

ರಾಜ್‌ಕೋಟ್‌:ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ವೇಗವಾಗಿ 100 ವಿಕೆಟ್‌ ಪಡೆದ ಸ್ಪಿನ್ನರ್‌ ಹಾಗೂ ಮೂರನೇ ಬೌಲರ್ ಎನಿಸಿದರು. ಆಸ್ಟ್ರೇಲಿಯಾ ವಿರುದ್ಧದಸರಣಿಯ ಎರಡನೇ ಪಂದ್ಯದ ವೇಳೆ ಈ ಸಾಧನೆ ಮಾಡಿದರು.‌

ಶತಕದ ಹೊಸ್ತಿಲಲ್ಲಿದ್ದ ಸ್ಟೀವ್‌ ಸ್ಮಿತ್ (98) ಯಾದವ್‌ಗೆ ನೂರನೇ ಬಲಿಯಾದರು. ಆ ಮೂಲಕ ಯಾದವ್‌ ತಮ್ಮ 58ನೇ ಪಂದ್ಯದಲ್ಲಿ ನೂರು ವಿಕೆಟ್‌ ಸಾಧನೆ ಮಾಡಿ ಸಂಭ್ರಮಿಸಿದರು. ಇದರೊಂದಿಗೆ ಹರ್ಭಜನ್‌ ಸಿಂಗ್‌ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಹರ್ಭಜನ್‌ ಈ ಸಾಧನೆ ಮಾಡಲು 76 ಪಂದ್ಯಗಳನ್ನು ತೆಗೆದುಕೊಂಡಿದ್ದರು.

ಮೊಹಮದ್‌ ಶಮಿ ಭಾರತ ಪರ ವೇಗವಾಗಿ 100 ವಿಕೆಟ್‌ ಪಡೆದ ಬೌಲರ್‌ ಎನಿಸಿದ್ದಾರೆ. ಇದಕ್ಕಾಗಿ ಅವರು 56ನೇ ಇನಿಂಗ್ಸ್‌ ತೆಗೆದುಕೊಂಡಿದ್ದರು. ಎರಡನೇ ಸ್ಥಾನದಲ್ಲಿ ಜಸ್‌ಪ್ರೀತ್‌ ಬೂಮ್ರಾ (57) ಇದ್ದಾರೆ.

54 ಇನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿರುವ ಅಫ್ಗಾನಿಸ್ತಾನದ ರಶೀದ್‌ ಖಾನ್‌ ವಿಶ್ವ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿಚೇಲ್‌ ಸ್ಟಾರ್ಕ್‌ (52) ಎರಡನೇ ಸ್ಥಾನದಲ್ಲಿದ್ದಾರೆ.

ಸರಣಿ ಸಮಬಲ
ಮೊದಲ ಪಂದ್ಯದಲ್ಲಿ ಹತ್ತು ವಿಕೆಟ್‌ ಗೆಲುವು ಸಾಧಿಸಿ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದ ಆಸ್ಟ್ರೇಲಿಯಾಗೆ ಭಾರತ ತಿರುಗೇಟು ನೀಡಿದೆ.

ಟಾಸ್‌ ಗೆದ್ದರೂ ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟ ನಾಯಕ ಆ‌್ಯರನ್‌ ಫಿಂಚ್‌ ನಿರ್ಧಾರವನ್ನು ತಲೆಕೆಳಗಾಗಿಸಿದ ವಿರಾಟ್‌ ಕೊಹ್ಲಿ ಪಡೆಯ ಬ್ಯಾಟ್ಸ್‌ಮನ್‌ಗಳು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 340 ರನ್‌ ಗಳಿಸಿದರು. ಆರಂಭಿಕ ಶಿಖರ್‌ ಧವನ್‌ (94), ಕೊಹ್ಲಿ (78) ಹಾಗೂ ಕನ್ನಡಿಗ ಕೆ.ಎಲ್‌. ರಾಹುಲ್‌ (80) ಅರ್ಧಶತಕ ಗಳಿಸಿ ಮಿಂಚಿದರು.

ಈ ಮೊತ್ತ ಬನ್ನಟ್ಟಿದ ಆಸಿಸ್‌ 49.1ನೇ ಓವರ್‌ನಲ್ಲಿ 304 ರನ್‌ ಗಳಿಸಿ ಆಲೌಟ್‌ ಆಯಿತು. ಹೀಗಾಗಿ ಮೂರು ಪಂದ್ಯಗಳ ಸರಣಿಯು 1–1ರಲ್ಲಿ ಸಮಬಲವಾಗಿದ್ದು ಭಾನುವಾರ (ಜ.19) ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯವು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT