ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ: ವಿಶ್ವ ಟೆಸ್ಟ್‌ ಫೈನಲ್‌ ಪ್ರವೇಶದ ಸವಾಲು

Last Updated 8 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಅಹಮದಾಬಾದ್: ಬಾರ್ಡರ್‌–ಗಾವಸ್ಕರ್ ಟ್ರೋಫಿ ವಿಜಯ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶದ ಗುರಿಗಳು ಈಡೇರಬೇಕಾದರೆ ಭಾರತ ತಂಡವು ಗುರುವಾರ ಇಲ್ಲಿ ಆರಂಭವಾಗುವ ನಾಲ್ಕನೇ ಟೆಸ್ಟ್‌ನಲ್ಲಿ ಜಯಿಸಬೇಕು.

ಅದಕ್ಕಾಗಿ ಆತಿಥೇಯ ತಂಡದಲ್ಲಿರುವ ‘ಬ್ಯಾಟಿಂಗ್ ತಾರೆ’ಯರು ಬೆಳಗಬೇಕು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2–1ರಿಂದ ಮುಂದಿದೆ. ಆದರೆ, ಇಂದೋರ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಭಾರತದ ಆಟಗಾರರು ಪ್ರವಾಸಿ ಸ್ಪಿನ್‌ ಬೌಲರ್‌ಗಳ ಮುಂದೆ ಮಂಡಿಯೂರಿದ್ದರು.

ಒಟ್ಟಾರೆ ಇಡೀ ಸರಣಿಯಲ್ಲಿ ಬೌಲರ್‌ಗಳು ಪಾರಮ್ಯ ಮೆರೆದಿದ್ದಾರೆ. ಆದರೆ, ಬ್ಯಾಟರ್‌ಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಸತತ ವೈಫಲ್ಯ ಅನುಭವಿಸಿದ ಕೆ.ಎಲ್. ರಾಹುಲ್ ಬದಲಿಗೆ ಸ್ಥಾನ ಪಡೆದ ಶುಭಮನ್ ಗಿಲ್ ಕೂಡ ರನ್‌ ಗಳಿಸಲಿಲ್ಲ. ನಾಯಕ ರೋಹಿತ್ ಶರ್ಮಾ ಟೆಸ್ಟ್ ಮಾದರಿಯ ಬ್ಯಾಟಿಂಗ್‌ಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ!

ವಿರಾಟ್ ದೊಡ್ಡ ಮೊತ್ತ ಗಳಿಸದಂತೆ ಪ್ರತಿ ಬಾರಿಯೂ ಸ್ಪಿನ್ನರ್ ಟಾಡ್ ಮರ್ಫಿ ಅಡ್ಡಗಾಲು ಹಾಕುತ್ತಿದ್ದಾರೆ. ಆದರೆ, ರೋಹಿತ್, ಕೊಹ್ಲಿ ಮತ್ತು ಪೂಜಾರ ತಮ್ಮ ಅನುಭವ ಹಾಗೂ ಸಾಮರ್ಥ್ಯವನ್ನು ವಿನಿಯೋಗಿಸಿದರೆ ಮಾತ್ರ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಿದೆ.

ಸ್ಪಿನ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ, ‘ಸ್ಥಳೀಯ ಹೀರೊ’ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ತಮ್ಮ ಹೊಣೆಯನ್ನು ಇಲ್ಲಿಯವರೆಗೂ ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಆದರೆ ಬ್ಯಾಟರ್‌ಗಳ ಕಡೆಯಿಂದಲೂ ಉತ್ತಮ ಮೊತ್ತ ಗಳಿಕೆಯಾದರೆ ಬೌಲರ್‌ಗಳ ವಿಶ್ವಾಸ ಹೆಚ್ಚುತ್ತದೆ. ‌ ಕಳೆದ ಮೂರು ಪಂದ್ಯಗಳೂ ಮೂರನೇ ದಿನವೇ ಮುಕ್ತಾಯವಾಗಿವೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಕೂಡ ಸ್ಪಿನ್ನರ್‌ಗಳಿಗೇ ಮಣೆ ಹಾಕುವ ಗುಣ ಹೊಂದಿದೆ. ನೇಥನ್ ಲಯನ್, ಮ್ಯಾಟ್ ಕುನೆಮನ್ ಮತ್ತು ಮರ್ಫಿ ಅವರೂ ತಮ್ಮ ಕೌಶಲ ಮೆರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ದರಿಂದ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಶುಭ ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಸ್. ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್, ಉನದ್ಕತ್ .

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಮ್ಯಾಥ್ಯೂ ರೆನ್‌ಶಾ, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಕ್ಯಾಮರಾನ್ ಗ್ರೀನ್, ಮ್ಯಾಟ್ ಕುನೆಮನ್, ಮಾರ್ನಸ್ ಲಾಬುಷೇನ್, ನೇಥನ್ ಲಯನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಿಪ್ಸನ್, ಸ್ಕಾಟ್ ಬೊಲಾಂಡ್.

ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

*
ಕಳೆದ ಮೂರು ಪಂದ್ಯಗಳು ನಡೆದಿದ್ದ ಪಿಚ್‌ಗಳಿಗೆ ಹೋಲಿಕೆ ಮಾಡಿದರೆ ಇಲ್ಲಿಯದ್ದು ಸಪಾಟಾಗಿದೆ. ಮೊದಲ ದಿನವೇ ಹೆಚ್ಚು ಸ್ಪಿನ್ ಆಗುವ ಸಾಧ್ಯತೆ ಕಡಿಮೆ.
–ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ ನಾಯಕ

**

ಮೋದಿ–ಅಲ್ಬೇನಿಸ್ ಆಗಮನ
ಅಹಮದಾಬಾದ್:
ಗುರುವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅಂತೋನಿ ಅಲ್ಬೇನಿಸ್‌ ಆಗಮಿಸಲಿದ್ದಾರೆ.

‘ಇದರಿಂದಾಗಿ ಕ್ರೀಡಾಂಗಣಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಬ್ಬರೂ ಪ್ರಧಾನಿಗಳು ಬಂಗಾರಬಣ್ಣದ ಗಾಲ್ಫ್‌ ಕಾರ್‌ನಲ್ಲಿ ಕ್ರೀಡಾಂಗಣ ಪ್ರವೇಶಿಸಬಹುದು. ಈಚೆಗೆ ಇಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಾಗಲೂ ಇದೇ ಮಾದರಿಯ ಗಾಲ್ಫ್ ಕಾರ್ ಇತ್ತು’ ಎಂದು ಮೂಲಗಳು ತಿಳಿಸಿವೆ.

1.10 ಲಕ್ಷ ಜನರು ಕುಳಿತು ಕೊಳ್ಳಬಹುದಾದ ಪ್ರೇಕ್ಷಕರ ಗ್ಯಾಲರಿಗಳಿರುವ ಕ್ರೀಡಾಂಗಣ ಇದಾಗಿದೆ. ಪಂದ್ಯದ ಮೊದಲ ದಿನ ಒಂದು ಲಕ್ಷ ಜನರು ಹಾಜರಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT