ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಭಾರತಕ್ಕೆ ಸರಣಿ ಜಯದ ರಂಗು

2-1 ಅಂತರದಲ್ಲಿ ಸರಣಿ ಗೆದ್ದ ಭಾರತ
Last Updated 28 ಮಾರ್ಚ್ 2021, 19:12 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಭಾನುವಾರ ರಾತ್ರಿ ಕೊನೆಯ ಓವರ್‌ನವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಜಯ ಸಾಧಿಸಿದ ವಿರಾಟ್ ಕೊಹ್ಲಿ ಪಡೆಯು ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿತು. ಹೋಳಿ ಹಬ್ಬದ ಸಂಭ್ರಮ ಮತ್ತಷ್ಟು ರಂಗೇರಿತು.

ಇದರೊಂದಿಗೆ ಪ್ರವಾಸಿ ಬಳಗದ ಸ್ಯಾಮ್ ಕರನ್ ವಿರೋಚಿತ ಹೋರಾಟ ಇತಿಹಾಸದ ಪುಟ ಸೇರಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ ತಂಡವು 7 ರನ್‌ಗಳಿಂದ ಜಯಿಸಿತು. 2–1ರಿಂದ ಸರಣಿ ಗೆದ್ದಿತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಗಳನ್ನೂ ಭಾರತ ಜಯಿಸಿತ್ತು.

ಸತತ ಮೂರನೇ ಪಂದ್ಯದಲ್ಲಿಯೂ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿಖರ್ ಧವನ್, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡವು 48.2 ಓವರ್‌ಗಳಲ್ಲಿ 329 ರನ್‌ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 322 ರನ್‌ ಗಳಿಸಿತು.

ಈ ಪಂದ್ಯದಲ್ಲಿ ಸುಲಭವಾಗಿ ಜಯಿಸಬಹುದಾಗಿದ್ದ ಅವಕಾಶ ಭಾರತಕ್ಕೆ ಇತ್ತು. ಆದರೆ, ಕಳಪೆ ಫೀಲ್ಡಿಂಗ್ ಮತ್ತು ಕೈಚೆಲ್ಲಿದ ಐದು ಕ್ಯಾಚ್‌ಗಳಿಂದಾಗಿ ಕಠಿಣ ಹಾದಿ ಸವೆಸಿ ಜಯ ಸಾಧಿಸಬೇಕಾಯಿತು. ತಮಗೆ ಲಭಿಸಿದ ಮೂರು ಜೀವದಾನಗಳ ಲಾಭ ಪಡೆದ ಸ್ಯಾಮ್ ಕರನ್ (ಔಟಾಗದೆ 95) ತಮ್ಮ ತಂಡವನ್ನು ಗೆಲುವಿನಂಚಿಗೆ ತಂದಿದ್ದರು. ಅವರಿಗೆ ಒಂಬತ್ತನೇ ವಿಕೆಟ್‌ ಜೊತೆಯಾಟದಲ್ಲಿ ದಿಟ್ಟ ಬೆಂಬಲ ನೀಡಿದ್ದ ಮಾರ್ಕ್‌ವುಡ್ ಕೊನೆಯ ಓವರ್‌ನಲ್ಲಿ ರನ್‌ಔಟ್ ಆದಾಗಲೇ ಭಾರತದ ಪಾಳಯದಲ್ಲಿ ಮತ್ತೆ ಜಯದ ವಿಶ್ವಾಸ ಮೂಡಿತು. 50ನೇ ಓವರ್ ಬೌಲಿಂಗ್ ಮಾಡಿದ ತಂಗರಸು ನಟರಾಜನ್ ದುಬಾರಿಯಾಗದ ಕಾರಣ ವಿರಾಟ್ ಕೊಹ್ಲಿ ನಿಟ್ಟುಸಿರು ಬಿಟ್ಟರು. ಏಕೆಂದರೆ ತಮ್ಮ ಮೊದಲ ಸ್ಪೆಲ್‌ನಲ್ಲಿ ನಟರಾಜನ್‌ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ದಂಡನೆಗೆ ಒಳಗಾಗಿದ್ದರು.

ಶಾರ್ದೂಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ಕೂಡ ತಂಡದ ಜಯಕ್ಕೆ ಮಹತ್ವದ
ಕಾಣಿಕೆಯಾಯಿತು.

ಪಂತ್–ಪಾಂಡ್ಯ ಅಬ್ಬರ: ಶತಕದ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಈ ಜೊತೆಯಾಟ ಮುರಿದುಬಿದ್ದ ನಂತರ, ನಾಯಕ ವಿರಾಟ್ ಕೊಹ್ಲಿ, ಹೋದ ಪಂದ್ಯದಲ್ಲಿ ಶತಕ ಹೊಡೆದಿದ್ದ ಕೆ.ಎಲ್. ರಾಹುಲ್ ಬೇಗನೆ ನಿರ್ಗಮಿಸಿದರು. ಇಬ್ಬರೂ ತಲಾ ಏಳು ರನ್ ಗಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ (78; 62ಎ) ಮತ್ತು ಹಾರ್ದಿಕ್ ಪಾಂಡ್ಯ (64; 44ಎ) ಆಟಕ್ಕೆ ಇಂಗ್ಲೆಂಡ್‌ ಬೌಲರ್‌ಗಳು ಹೌಹಾರಿದರು. ಪಂತ್ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅವರಿಗಿಂತ ವೇಗವಾಗಿ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಕೇವಲ 36 ಎಸೆತಗಳಲ್ಲಿ 50 ರನ್‌ ಗಳಿಸಿದರು. ಐದನೇ ವಿಕೆಟ್‌ ಜೊತೆಯಾಟದಲ್ಲಿ 99 ರನ್‌ ಪೇರಿಸಿದರು. ಇಬ್ಬರೂ ತಲಾ ನಾಲ್ಕು ಸಿಕ್ಸರ್‌ ಸಿಡಿಸಿದರು.

ಶಿಖರ್–ರೋಹಿತ್ ಶುಭಾರಂಭ: ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಭಾರತದ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 103 ರನ್‌ಗಳನ್ನು ಕಲೆಹಾಕಿದರು.

ಮೊದಲ ಪಂದ್ಯದಲ್ಲಿ 98 ರನ್ ಗಳಿಸಿದ್ದ ಶಿಖರ್ ಇಲ್ಲಿಯೂ ಅರ್ಧಶತಕ ಹೊಡೆದರು. 56 ಎಸೆತಗಳಲ್ಲಿ 67 ರನ್ ಗಳಿಸಿದರು. ಅದರಲ್ಲಿ 10 ಬೌಂಡರಿಗಳಿದ್ದವು. ರೋಹಿತ್ 6 ಬೌಂಡರಿ ಹೊಡೆದರು. ಆದರೆ ಅರ್ಧಶತಕ ಗಳಿಸುವ ಅವರ ಗುರಿಗೆ ಸ್ಪಿನ್ನರ್ ರಶೀದ್ ಅಡ್ಡಿಯಾದರು. ಗೂಗ್ಲಿ ಎಸೆತವನ್ನು ಆಡುವಲ್ಲಿ ರೋಹಿತ್ ವಿಫಲರಾದರು.

ಕರನ್ ದಾಖಲೆ: ಇಂಗ್ಲೆಂಡ್‌ ಸ್ಯಾಮ್‌ ಕರನ್‌ ಏಕದಿನ ಮಾದರಿಯಲ್ಲಿ ಎಂಟು ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ (ಔಟಾಗದೆ 95) ಗಳಿಸಿದ ಆಟಗಾರ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT