ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3rd Test: ಧ್ರುವ, ಸರ್ಫರಾಜ್ ಪದಾರ್ಪಣೆ; ಭಾರತಕ್ಕೆ ಆರಂಭಿಕ ಆಘಾತ ನೀಡಿದ ಆಂಗ್ಲರು

Published 15 ಫೆಬ್ರುವರಿ 2024, 4:53 IST
Last Updated 15 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಯುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸರ್ಫರಾಜ್‌ ಖಾನ್‌ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ.

ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿರುವ ಉಭಯ ತಂಡಗಳು ಈ ಪಂದ್ಯ ಗೆದ್ದು ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ.‌ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 28 ರನ್‌ ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್‌, ಎರಡನೇ ಪಂದ್ಯವನ್ನು 106 ರನ್‌ ಅಂತರದಿಂದ ಸೋತಿತ್ತು.

ಬ್ಯಾಟಿಂಗ್ ಆರಂಭಿಸಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದ್ದ ಯಶಸ್ವಿ ಜೈಸ್ವಾಲ್‌ (10), ಶುಭಮನ್‌ ಗಿಲ್‌ (0) ಬೇಗನೆ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಸದ್ಯ ನಾಯಕ ರೋಹಿತ್‌ ಶರ್ಮಾ ಮತ್ತು ರಜತ್ ಪಾಟೀದಾರ್ ಕ್ರೀಸ್‌ನಲ್ಲಿದ್ದು, ತಂಡದ ಮೊತ್ತ 7 ಓವರ್‌ಗಳಲ್ಲಿ 2 ವಿಕೆಟ್‌ಗೆ 25 ರನ್‌ ಆಗಿದೆ.

ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆ
‌ಆತಿಥೇಯ ಬಳಗಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತಲೆನೋವಾಗಿ ಪರಿಣಮಿಸಿದೆ. ಆರಂಭಿಕ ಬ್ಯಾಟರ್ ರೋಹಿತ್ ಕೂಡ ರನ್‌ ಗಳಿಸುವಲ್ಲಿ ಹಿಂದುಳಿದಿದ್ದಾರೆ. ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯು ಗಾಢವಾಗಿ ಕಾಡುತ್ತಿದೆ.

ವಿಕೆಟ್‌ಕೀಪರ್ ಕೆ.ಎಸ್‌. ಭರತ್ ನಿರೀಕ್ಷೆಗೆ ತಕ್ಕಂತೆ ಆಡದ ಕಾರಣ ಅವರ ಬದಲು ಉತ್ತರ ಪ್ರದೇಶದ ಧ್ರುವ ಜುರೇಲ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಮುಂಬೈನ ಸರ್ಫರಾಜ್ ಸಹ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದಾರೆ. ಕಳೆದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ರಜತ್ ಅವರಿಗೆ ಸಾಮರ್ಥ್ಯ ಸಾಬೀತು ಮಾಡಲು ಮತ್ತೊಂದು ಅವಕಾಶ ನೀಡಲಾಗಿದೆ. ತಮ್ಮ ಆಯ್ಕೆಯನ್ನು ಸಮರ್ಥಿಸುವಂತೆ ಆಡುವ ಸವಾಲು ಈ ಮೂವರ ಮೇಲೂ ಇದೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಮತ್ತು ವೇಗಿ ಮೊಹಮ್ಮದ್‌ ಸಿರಾಜ್ ತಂಡಕ್ಕೆ ಮರಳಿದ್ದಾರೆ. ಅಕ್ಷರ್‌ ಪಟೇಲ್ ಹಾಗೂ ವೇಗಿ ಮುಖೇಶ್‌ ಕುಮಾರ್‌ ಅವರಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಇಂಗ್ಲೆಂಡ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶೋಯಬ್‌ ಬಷೀರ್‌ ಬದಲು ಅನುಭವಿ ವೇಗಿ ಮಾರ್ಕ್ ವುಡ್‌ ತಂಡ ಕೂಡಿಕೊಂಡಿದ್ದಾರೆ.

ಪ್ರವಾಸಿ ಪಡೆಯು ‘ಬಾಝ್‌ಬಾಲ್’ ತಂತ್ರವನ್ನು ಮುಂದುವರಿಸುವ ಯೋಚನೆಯಲ್ಲಿದ್ದು, ರೋಹಿತ್ ಬಳಗ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ತೋರಬೇಕಾದ ಅನಿವಾರ್ಯತೆ ಇದೆ.

ಸ್ಟೋಕ್ಸ್‌ಗೆ 100ನೇ ಟೆಸ್ಟ್
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌  ಅವರಿಗೆ ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ 100ನೇ ಪಂದ್ಯವಾಗಿದೆ. ಆಂಗ್ಲರ ತಂಡದ ಪರ ಈ ಸಾಧನೆ ಮಾಡಿದ 16ನೇ ಆಟಗಾರ ಎನಿಸಿಕೊಂಡಿರುವ ಸ್ಟೋಕ್ಸ್‌, ಈ ಪಂದ್ಯದಲ್ಲಿ ಅವಿಸ್ಮರಣೀಯ ಜಯ ಗಳಿಸುವ ಛಲದಲ್ಲಿದ್ದಾರೆ.

ಆಲ್‌ರೌಂಡರ್‌ ಆಗಿರುವ ಸ್ಟೋಕ್ಸ್‌, ಇಂಗ್ಲೆಂಡ್‌ ಪರ 99 ಪಂದ್ಯಗಳ 179 ಇನಿಂಗ್ಸ್‌ಗಳಿಂದ 6,251 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ, 13 ಶತಕ, 31 ಅರ್ಧಶತಕಗಳು ಸೇರಿವೆ.

146 ಇನಿಂಗ್ಸ್‌ಗಳಿಂದ 32ರ ಸರಾಸರಿಯಲ್ಲಿ 197 ವಿಕೆಟ್‌ ಕಬಳಿಸಿದ್ದಾರೆ. ನಾಲ್ಕು ಬಾರಿ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT