ಸೋಮವಾರ, ಸೆಪ್ಟೆಂಬರ್ 27, 2021
23 °C
ಜೋ ರೂಟ್ ಅರ್ಧಶತಕ; ಭಾರತ ತಂಡದಲ್ಲಿ ನಾಲ್ವರು ಮಧ್ಯಮವೇಗಿಗಳಿಗೆ ಸ್ಥಾನ

ಬೂಮ್ರಾ–ಶಮಿ ಬಿರುಗಾಳಿಗೆ ಇಂಗ್ಲೆಂಡ್ ತತ್ತರ, 183ಕ್ಕೆ ಆಲೌಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಟಿಂಗ್‌ಹ್ಯಾಮ್ (ಪಿಟಿಐ):  ಭಾರತ ತಂಡದ ‘ಭಲೇ ಜೋಡಿ’ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಬೌಲಿಂಗ್‌ ಮುಂದೆ ಆತಿಥೇಯ ಇಂಗ್ಲೆಂಡ್ ತಡಬಡಾಯಿಸಿತು.

ಬುಧವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಯಾರ್ಕರ್ ಪರಿಣತ ಬೂಮ್ರಾ (46ಕ್ಕೆ4) ಮತ್ತು ಸ್ವಿಂಗ್ ಸುಲ್ತಾನ ಶಮಿ (28ಕ್ಕೆ3) ಅವರಿಬ್ಬರ ಆಟಕ್ಕೆ ತತ್ತರಿಸಿದ ಇಂಗ್ಲೆಂಡ್ ತಂಡವು 65.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿ ಬೂಮ್ರಾ ಗರ್ಜಿಸಿದರು. ಐದನೇ ಎಸೆತದಲ್ಲಿ ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ರೋರಿ ಬರ್ನ್ಸ್‌ ಬಿದ್ದರು. ಖಾತೆ ತೆರೆಯದೇ ಮರಳಿದರು.

ಕ್ರೀಸ್‌ನಲ್ಲಿದ್ದ ಡ್ಯಾಮ್ ಸಿಬ್ಲಿಯೊಂದಿಗೆ ಸೇರಿದ ಜ್ಯಾಕ್ ಕ್ರಾಲಿ ಅವರು ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು. ಅಪಾರ ತಾಳ್ಮೆಯಿಂದ ಆಡುತ್ತಿದ್ದ ಇವರ ಜೊತೆಯಾಟವನ್ನು ಮೊಹಮ್ಮದ್ ಸಿರಾಜ್ ಮುರಿದರು. 21ನೇ ಓವರ್‌ನಲ್ಲಿ ಕೀಪರ್ ರಿಷಭ್ ಪಂತ್‌ಗೆ ಕ್ರಾಲಿ ಕ್ಯಾಚಿತ್ತರು.

ರೂಟ್ ಅರ್ಧಶತಕ: ಕ್ರೀಸ್‌ಗೆ ಬಂದ ನಾಯಕ ಜೋ ರೂಟ್ ಮಾತ್ರ ದಿಟ್ಟತನ ಮತ್ತು ತಾಳ್ಮೆಯಿಂದ ಭಾರತದ ಬೌಲರ್‌ಗಳ ದಾಳಿಯನ್ನು ಎದುರಿಸಿದರು. 108 ಎಸೆತಗಳಲ್ಲಿ 64 ರನ್ ಗಳಿಸಿದ ಅವರು ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ತಂಡಕ್ಕೆ ಭರವಸೆ ಇತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ಬೌಲರ್‌ಗಳು ಬಿಡಲಿಲ್ಲ.

ಶಮಿ ಅವರು, ಡಾಮ್ ಸಿಬ್ಲಿ, ಜಾನಿ ಬೆಸ್ಟೊ ಮತ್ತು ಡ್ಯಾನ್ ಲಾರೆನ್ಸ್‌ ವಿಕೆಟ್ ಕಬಳಿಸಿದರು.  ಇನ್ನೊಂದೆಡೆ ಬೂಮ್ರಾ ಬೌಲಿಂಗ್‌ಗೆ ಜೊಸ್ ಬಟ್ಲರ್, ಸ್ಟುವರ್ಟ್ ಬ್ರಾಡ್  ಮತ್ತು ಜೇಮ್ಸ್‌ ಆ್ಯಂಡರ್ಸನ್ ಅವರು ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಶಾರ್ದೂಲ್ ಠಾಕೂರ್ (41ಕ್ಕೆ2) ಪೆಟ್ಟು ಕೊಟ್ಟರು. ತಂಡದಲ್ಲಿ ಸ್ಥಾನ ಪಡೆದಿರುವ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಕೇವಲ ಮೂರು ಓವರ್‌ ಬೌಲಿಂಗ್ ಮಾಡಿದರು. ಅವರಿಗೆ ವಿಕೆಟ್ ಲಭಿಸಲಿಲ್ಲ.

ಆಫ್‌ಸ್ಪಿನ್ನರ್ ಆರ್. ಆಶ್ವಿನ್‌ಗೆ ವಿಶ್ರಾಂತಿ ನೀಡಲಾಗಿದೆ.

ಮೊದಲ ದಿನದಾಟ ಮುಗಿದಾಗ ಭಾರತವು ಯಾವುದೇ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು