ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ 153/4 ಇದ್ದದ್ದು 153ಕ್ಕೇ ಆಲ್ ಔಟ್‌: ಒಂದೂ ರನ್ ಸೇರಿಸದೆ 6 ವಿಕೆಟ್ ಪತನ

Published 3 ಜನವರಿ 2024, 14:51 IST
Last Updated 3 ಜನವರಿ 2024, 14:51 IST
ಅಕ್ಷರ ಗಾತ್ರ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಆತಿಥೇಯ ಪಡೆಯನ್ನು ಕೇವಲ 55 ರನ್‌ಗಳಿಗೆ ಆಲೌಟ್‌ ಮಾಡಿ ಬೀಗಿದ್ದ ಟೀಂ ಇಂಡಿಯಾ ಸಹ ಆಘಾತ ಅನುಭವಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಡೀನ್‌ ಎಲ್ಗರ್‌ ಪಡೆ ಗಳಿಸಿದ ಅಲ್ಪ ಮೊತ್ತದೆದುರು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಆರು ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಟೀ ಇಂಡಿಯಾ 153 ರನ್‌ಗಳಿಗೆ ಆಲೌಟ್‌ ಆಯಿತಾದರೂ, ಕೊನೆಯ ಆರು ವಿಕೆಟ್‌ಗಳು ಒಂದೂ ರನ್‌ ಗಳಿಸದೆ ಪತನವಾಗಿದ್ದು ಅಚ್ಚರಿ ಮೂಡಿಸಿತು.

ನಾಯಕ ರೋಹಿತ್‌ ಶರ್ಮಾ (39), ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ (36), ವಿರಾಟ್‌ ಕೊಹ್ಲಿ (46) ಮತ್ತು ಕೆ.ಎಲ್‌.ರಾಹುಲ್‌ (8) ಹೊರತುಪಡಿಸಿ ಉಳಿದ ಯಾರೂ ಖಾತೆ ತೆರೆಯಲಿಲ್ಲ.

11 ಎಸೆತದಲ್ಲಿ 6 ವಿಕೆಟ್‌
ರೋಹಿತ್‌ ಪಡೆ 33 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿತ್ತು. ಹೀಗಾಗಿ ಉತ್ತಮ ಮೊತ್ತ ಗಳಿಸುವ ಯೋಜನೆಯಲ್ಲಿತ್ತು. ಆದರೆ, ಈ ಹಂತದಲ್ಲಿ ದಾಳಿಗಿಳಿದ ವೇಗದ ಬೌಲರ್‌ ಲುಂಗಿ ಗಿಡಿ, ಪ್ರವಾಸಿ ಪಡೆಯ ದಿಢೀರ್‌ ಕುಸಿತಕ್ಕೆ ಕಾರಣರಾದರು.

34ನೇ ಓವರ್‌ನ ಮೊದಲ ಎಸೆತದಲ್ಲಿ ಕೆ.ಎಲ್‌.ರಾಹುಲ್‌ ಅವರನ್ನು ಔಟ್‌ ಮಾಡಿದ ಲುಂಗಿ, ಮೂರನೇ ಎಸೆತದಲ್ಲಿ ರವೀಂದ್ರ ಜಡೇಜ ಮತ್ತು 5ನೇ ಎಸೆತದಲ್ಲಿ ಜಸ್‌ಪ್ರಿತ್‌ ಬೂಮ್ರಾಗೆ ಪೆವಿಲಿಯನ್‌ ದಾರಿ ತೋರಿದರು.

ನಂತರದ ಓವರ್‌ ಎಸೆದ ಕಗಿಸೊ ರಬಾಡ, 2, 4 ಮತ್ತು 5ನೇ ಎಸೆತಗಳಲ್ಲಿ ಕ್ರಮವಾಗಿ ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ವಿಕೆಟ್‌ ಪಡೆದರು. ಹೀಗಾಗಿ ಟೀಂ ಇಂಡಿಯಾದ ಕೊನೆಯ ಆರು ವಿಕೆಟ್‌ಗಳು ಕೇವಲ 11 ಎಸೆತಗಳ ಅಂತರದಲ್ಲಿ ಒಂದೂ ರನ್‌ ಇಲ್ಲದೆ ಪತನವಾದವು.

ರಾಹುಲ್‌, ಕೊಹ್ಲಿ, ಜಡೇಜ ಅವರಂತಹ ಪ್ರಮುಖ ಬ್ಯಾಟರ್‌ಗಳೂ ಈ ಹಂತದಲ್ಲೇ ಔಟಾಗಿದ್ದು, ಭಾರತಕ್ಕೆ ಹಿನ್ನಡೆ ಉಂಟುಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT