ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA Test: ಸಿರಾಜ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 55 ರನ್‌ಗೆ ಆಲೌಟ್

Published 3 ಜನವರಿ 2024, 10:16 IST
Last Updated 3 ಜನವರಿ 2024, 10:16 IST
ಅಕ್ಷರ ಗಾತ್ರ

ಕೇಪ್‌ಟೌನ್: ಮೊಹಮ್ಮದ್‌ ಸಿರಾಜ್‌ ಅವರ ಬಿರುಗಾಳಿ ವೇಗದ ಬೌಲಿಂಗ್‌ ಎದುರು ದಿಕ್ಕೆಟ್ಟ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗೆ ಸರ್ವಪತನ ಕಂಡಿದೆ.

ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 32 ರನ್‌ ಅಂತರದ ಜಯ ಸಾಧಿಸಿ ಆತ್ಮ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಹರಿಣಗಳಿಗೆ ಸಿರಾಜ್‌ ಭಾರಿ ಆಘಾತ ನೀಡಿದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನಾಯಕ ಡೀನ್‌ ಎಲ್ಗರ್‌ ಅವರು ಕೈಕೈ ಹಿಸುಕಿಕೊಳ್ಳುವಂತೆ ಮಾಡಿದರು.

ಇನಿಂಗ್ಸ್ ಆರಂಭಿಸಿದ ಏಡನ್ ಮರ್ಕರಂ (2) ಹಾಗೂ ಡೀನ್ ಎಲ್ಗರ್ (4) ಅವರನ್ನು ತಂಡದ ಮೊತ್ತ 8 ರನ್‌ ಆಗುವಷ್ಟರಲ್ಲೇ ಸಿರಾಜ್‌ ಔಟ್‌ ಮಾಡಿದರು. ನಂತರ ಬಂದ ಟ್ರಿಸ್ಟನ್ ಸ್ಟಬ್ಸ್‌ಗೆ (3) ಜಸ್‌ಪ್ರಿತ್‌ ಬೂಮ್ರಾ ಪೆವಿಲಿಯನ್‌ ದಾರಿ ತೋರಿದರು. ಬಳಿಕ ಸಿರಾಜ್‌ ಅಬ್ಬರ ಇನ್ನಷ್ಟು ಜೋರಾಯಿತು. ಟೋನಿ ಡಿ ಝಾರ್ಜಿ (2), ಡೇವಿಡ್ ಬೆಡಿಂಗ್‌ಹ್ಯಾಮ್ (12), ಕೈಲ್ ವೆರೆಯನ್ (15) ಮತ್ತು ಮಾರ್ಕೊ ಯಾನ್ಸೆನ್ (0) ಅವರನ್ನು ಬೆನ್ನುಬೆನ್ನಿಗೆ ಔಟ್‌ ಮಾಡಿ, ಭಾರತಕ್ಕೆ ಮೇಲುಗೈ ತಂದುಕೊಟ್ಟರು.

ಸಿರಾಜ್‌ ಕೇವಲ 15 ರನ್‌ಗೆ ಆರು ವಿಕೆಟ್‌ ಪಡೆದು ಮಿಂಚಿದರು. ವೃತ್ತಿ ಜೀನವದ ಎರಡನೇ ಟೆಸ್ಟ್ ಆಡುತ್ತಿರುವ ಮುಕೇಶ್‌ ಕುಮಾರ್‌ ಮತ್ತು ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಸಂಭ್ರಮಿಸಿದರು. ಹೀಗಾಗಿ ಆತಿಥೇಯರ ಆಟ ಕೇವಲ 23.2 ಓವರ್‌ಗಳಲ್ಲೇ ಮುಗಿಯಿತು.

ಈ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಹಾಗೂ ಹೊಸ ವರ್ಷವನ್ನು ಜಯದ ಸಿಹಿಯೊಂದಿಗೆ ಆರಂಭಿಸುವ ಅವಕಾಶ ರೋಹಿತ್ ಶರ್ಮಾ ನಾಯಕತ್ವದ ಭಾರತಕ್ಕೆ ಒದಗಿ ಬಂದಂತಾಗಿದೆ. 

ಹನ್ನೊಂದರ ಬಳಗ
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಹಾಗೂ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್‌ ಬದಲು ರವೀಂದ್ರ ಜಡೇಜ ಮತ್ತು ಮುಕೇಶ್‌ ಕುಮಾರ್‌ ಅವರಿಗೆ ಸ್ಥಾನ ನೀಡಲಾಗಿದೆ.

ಆತಿಥೇಯ ಪಡೆಯಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ವೃತ್ತಿ ಬದುಕಿನ ಕೊನೇ ಟೆಸ್ಟ್‌ ಆಡುತ್ತಿರುವ ಡೀನ್‌ ಎಲ್ಗರ್‌ ಅವರು ತೆಂಬಾ ಬವುಮಾ ಬದಲು ಈ ಪಂದ್ಯದಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಬವುಮಾ ಬದಲು ಟ್ರಿಸ್ಟನ್ ಸ್ಟಬ್ಸ್ ಆಡುತ್ತಿದ್ದಾರೆ. ಗಾಯಗೊಂಡಿರುವ ಜೆರಾಲ್ಡ್‌ ಕೋಜಿ ಬದಲು ಲುಂಗಿ ಗಿಡಿ ಸ್ಥಾನ ಪಡೆದಿದ್ದಾರೆ. ಕೀಗನ್‌ ಪೀಟರ್ಸನ್‌ ಸ್ಥಾನದಲ್ಲಿ ಕೇಶವ್‌ ಮಹಾರಾಜ್‌ ಕಣಕ್ಕಿಳಿದಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಮುಕೇಶ್‌ ಕುಮಾರ್‌

ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್ (ನಾಯಕ), ಏಡನ್ ಮರ್ಕರಂ, ಟೋನಿ ಡಿ ಝಾರ್ಜಿ, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರೆಯನ್ (ವಿಕೆಟ್‌ಕೀಪರ್), ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಗಿಡಿ, ನಾಂದ್ರೆ ಬರ್ಗರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT